ಕರಾವಳಿ

ಕೆದೂರಿನಲ್ಲಿ ಮುಳುಗಿದ ರೈಲ್ವೇ ಹಳಿ: ರೈಲು ನಿಲ್ಲಿಸಿ ಸಮಯಪ್ರಜ್ಞೆ ತೋರಿದ ರೈಲು ಚಾಲಕ (Video)

Pinterest LinkedIn Tumblr

ಕುಂದಾಪುರ: ರೈಲ್ವೇ ಹಳಿ ತುಂಬಾ ಮೂರ್ನಾಲ್ಕು ಅಡಿ ಹರಿಯುತ್ತಿದ್ದ ನೀರು…ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ಆ ರೈಲಿನಲ್ಲಿದ್ದರು ಸಾವಿರಾರು ಮಂದಿ. ರೈಲ್ವೇ ಹಳಿಯಲ್ಲಿ ನೀರು ಕಂಡ ರೈಲು ಚಾಲಕ ಹಿಂದೆಮುಂದೆ ನೋಡಿಲ್ಲ. ತಕ್ಷಣ ರೈಲು ನಿಲ್ಲಿಸಿ ಆ ಮಳೆಯಲ್ಲೇ ಕಿಲೋಮೀಟರ್ ದೂರ ನಡೆದು ಸಾಗಿ ರೈಲು ಹಳಿ ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಸಂಭವ್ಯ ಅವಘಡ ತಪ್ಪಿಸುವ ಸಮಯಪ್ರಜ್ಞೆ ಮೆರೆದ ರೈಲು ಚಾಲಕನ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಅದು 12619 ನಂಬರಿನ ಮತ್ಸಗಂಧ ರೈಲು. ಮುಂಬೈನಿಂದ ಮಂಗಳೂರಿನತ್ತ ಮಂಗಳವಾರ ಬೆಳಿಗ್ಗೆ ಬರುತ್ತಿದ್ದ ಸಮಯ. ಉಡುಪಿ ಜಿಲ್ಲೆ ಕೆದೂರು ಎಂಬಲ್ಲಿ ಒಂದಷ್ಟು ದೂರದ ಹಿಂದೆಯೇ ರೈಲು ಚಾಲಕ ಹಳಿಯ ಮೇಲೆ ಕೆಂಬಣ್ಣದಲ್ಲಿದ್ದ ಮಳೆ ನೀರುಕಂಡು ರೈಲು ನಿಲ್ಲಿಸಿದ್ದಾರೆ. ಬಳಿಕ ತಾನು ಇತರೆ ಸಿಬ್ಬಂದಿಗಳ ಜೊತೆ ಮಳೆಯಲ್ಲಿ ನಡೆದು ಸಾಗಿ ರೈಲು ಮುಂದಕ್ಕೆ ಸಾಗಲು ಅನುಕೂಲ ಪರಿಸ್ಥಿತಿಯಿದೆಯೇ ಎಂಬುದನ್ನು ಪರಿಶೀಲಿಸಿ ಕಂಟ್ರೋಲ್ ರೂಂಗೆ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ, ಭಯವಾಗದೆಂಬ ನಿಟ್ಟಿನಲ್ಲಿ ಸುಮಾರು 20 ನಿಮಿಷಗಳಷ್ಟು ಕಾಲ ರೈಲನ್ನು ನಿಲ್ಲಿಸಿ ಮಳೆ ನೀರು ಹತೋಟಿಗೆ ಬಂದ ಬಳಿಕ ರೈಲನ್ನು ಮಂಗಳೂರಿನತ್ತ ಚಲಾಯಿಸಿದ್ದಾರೆ.

ರಾಜ್ಯಾದ್ಯಂತ ಮಳೆ ಇರುವ ಹಿನ್ನೆಲೆ ಕೆದೂರು ಭಾಗದಲ್ಲಿ ರೈಲು ಹಳಿ ಮೇಲೆ ನೀರು ನಿಂತ ಮುನ್ಸೂಚನೆ ನೋಟಿಸ್ ಕುಂದಾಪುರದಲ್ಲಿಯೇ ರೈಲು ಚಾಲಕನಿಗೆ ನೀಡಿದ್ದು ಈ ಹಿನ್ನೆಲೆ ರೈಲು ನಿಧಾನಗತಿಯಲ್ಲಿ ಸಾಗುತ್ತಿತ್ತು. ಆದರೆ ಕಿಲೋಮೀಟರ್ ದೂರದ ಹಿಂದೆ ರೈಲು ಚಾಲಕನಿಗೆ ವಿಪರೀತ ನೀರುಕಂಡುಬಂದು ಹಳಿಗಳು ನೀರಿನಲ್ಲಿ ಮುಚ್ಚಿದ್ದು ಅರಿತ ಹಿನ್ನೆಲೆ ರೈಲು ನಿಲ್ಲಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ನೀರಿನ ಪ್ರಮಾಣ ಇಳಿಕೆಯಾದ ಬಳಿಕ ರೈಲು ಮುಂದಕ್ಕೆ ಸಾಗಿದೆ ಎಂದು ಮಂಗಳೂರು ಕೊಂಕಣ ರೈಲ್ವೇ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕರಾದ ಸುಧಾ ಕೃಷ್ಣಮೂರ್ತಿ ‘ಕನ್ನಡಿಗ ವರ್ಲ್ಡ್’ಗೆ ಮಾಹಿತಿ ನೀಡಿದ್ದಾರೆ.

ತಾನು ಚಲಾಯಿಸುತ್ತಿರುವ ರೈಲಿನಲ್ಲಿದ್ದ ಸಾವಿರಾರು ಮಂದಿಯ ಪ್ರಾಣ ರಕ್ಷಣೆ ಹಿನ್ನೆಲೆ ರೈಲು ಚಾಲಕ ತೋರಿದ ಸಮಯಪ್ರಜ್ಞೆ ರೈಲ್ವೇ ಇಲಾಖಾಧಿಕಾರಿಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿಯೂ ಕೂಡ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.