ಕರಾವಳಿ

ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಜನ ತಕ್ಕ ಬುದ್ದಿ ಹೇಳಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ (Video)

Pinterest LinkedIn Tumblr

ಉಡುಪಿ: ಗುರುವಾರ ಲೋಕಸಭಾ ತೀರ್ಪು ಹೊರಬಿದ್ದಿದ್ದು ಬಿಜೆಪಿ ನಿರೀಕ್ಷೆಗಿಂತ ಅಧಿಕ ಸೀಟನ್ನು ರಾಜ್ಯ ಹಾಗೂ ದೇಶದಲ್ಲಿ ಪಡೆಯುವ ಮೂಲಕ ಉತ್ಸಾಹದಲ್ಲಿದೆ. ಇದೇ ಸಂದರ್ಭ ಕರ್ನಾಟಕ ರಾಜ್ಯದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಮ್ಮ ನಿವಾಸದಲ್ಲಿ ‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದ್ದಾರೆ. ಮೈತ್ರಿಸರಕಾರದ ಅಳಿವು-ಉಳಿವು, ದೇವೇಗೌಡರ ಕುಟುಂಬ ರಾಜಕಾರಣ, ಮಾಜಿ ಸಿಎಂ ಮಾತಿನ ಹಿಡಿತವಿಲ್ಲದ್ದರ ಬಗ್ಗೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದು ಅದರ ಪೂರ್ಣಪಾಠ ವಿಡಿಯೋ ಸಹಿತ ಇಲ್ಲಿದೆ.

ದೇವೇಗೌಡರದ್ದು ಕುಟುಂಬ ರಾಜಕಾರಣ…
ದೇವೆಗೌಡರ ಹಿರಿತನದ ಮೇಲೆ ಗೌರವವಿದೆ. ರಾಜಕೀಯ ಪಕ್ಷವೊಂದನ್ನು ಕುಟುಂಬದಂತೆ ನೋಡಬೇಕಿದೆ, ಆದರೆ ಕುಟುಬವನ್ನೇ ಪಕ್ಷವಾಗಿ ಮಾಡುವಂತಹ ಮನಸ್ಥಿತಿಯ ದೇವೇಗೌಡರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ರಾಜಕಾರಣದಲ್ಲಿರಬೇಕೆಂಬ ಕುಟುಂಬ ರಾಜಕಾರಣದ ಪರಿಕಲ್ಪನೆಗೆ ಕರ್ನಾಟಕ ರಾಜ್ಯದ ಜನರು ಸರಿಯಾದ ಬುದ್ದಿ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿದ್ಧರಾಮಯ್ಯ ಮೋದಿ ಕ್ಷಮೆ ಕೇಳಲಿ..
ಚುನಾವಣೆಯಲ್ಲಿ ಟೀಕೆ, ಪ್ರತಿಟೀಕೆ, ಆರೋಗ್ಯಕರ ಸ್ಪರ್ಧೆ ಮಾಮೂಲಿ. ಆದರೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಪ್ರಧಾನಿ ಮೋದಿಯವರಿಗೆ ಕಳ್ಳ-ಸುಳ್ಳ ಎಂದು ಅತ್ಯಂತ ಕೀಳುಮಟ್ಟದ ಭಾಷೆಯಲ್ಲಿ ಬೈದಿದ್ದಕ್ಕೆ ಕರ್ನಾಟಕದ ಜನರು ತಕ್ಕ ಉತ್ತರ ನೀಡಿದ್ದಾರೆ. ಸಿದ್ಧರಾಮಯ್ಯ ತಮ್ಮ ಆರೋಪಗಳನ್ನು ಪುನರ್ ಪರಿಶೀಲನೆ ಮಾಡುವುದು ಮಾತ್ರವಲ್ಲದೇ ನರೇಂದ್ರ ಮೋದಿಯವರ ಬೇಷರತ್ ಕ್ಷಮೆ ಯಾಚನೆ ಮಾಡಬೇಕು ಎಂದರು.

ಸುಮಲತಾ ಗೆಲುವು ಸಂತಸ ತಂದಿದೆ..
ಸುಮಲತಾರಂತಹ ಹೆಣ್ಣುಮಗಳೊಬ್ಬರನ್ನು ಮಣಿಸಲು ಸರಕಾರ ಮಾಡಿದ ಅಸಹ್ಯ ನಡವಳಿಕೆ, 150 ಕೋಟಿ ಖರ್ಚು ಮಾಡಿದ ರೀತಿ, ಅಧಿಕಾರ ದುರ್ಬಳಕೆ ಅಲ್ಲದೇ ಮೂರು ಸುಮಲತಾ ಹೆಸರಿನವರನ್ನು ನಿಲ್ಲಿಸಿದ್ದು ಎಲ್ಲವೂ ತಪ್ಪು. ಈ ನಡುವೆ ಸುಮಲತಾ ಗೆಲವು ರಾಜ್ಯದ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಲ್ಲಲ್ಪಟ್ಟ ಗೌರವ ಎಂದು ಅಭಿಪ್ರಾಯಪಟ್ಟರು.

ಮೈತ್ರಿ ಸರಕಾರ ಬೀಳಲಿದೆ…
ಈ ಮೈತ್ರಿ ಸರಕಾರದ ವ್ಯವಸ್ಥೆ ದ್ರತರಾಷ್ಟ್ರ ಆಲಿಂಗನದಂತೆ ಎಂದು ಈ ಹಿಂದೆಯೇ ಹೇಳಿದ್ದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗೋದು ತಡೆಯಲು ಇವರು ಮಾಡಿದ ತಂತ್ರ ಕುತಂತ್ರವು ಶೋಭೆಯಲ್ಲ. ಇದು ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ಸಿಗರಿಗೆ ಅರ್ಥವಾಗಿದ್ದು ಈ ಲೋಕಸಭಾ ಫಲಿತಾಂಶದ ನಂತರ ಯಾವುದಾದರೂ ಒಂದು ಕಾರಣದಲ್ಲಿ ಕಾಂಗ್ರೆಸ್ ಬೆಂಬಲ ವಾಪಾಸ್ ಪಡೆಯಬಹುದು ಅಥವಾ ಜೆಡಿಎಸ್ ಹಿಂದೆ ಬರಬಹುದು. ಆರೂವರೆ ಕೋಟಿ ಜನ ಬಯಸಿದಂತೆ ಈ ಸರಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು. ನಮ್ಮ ಸರಕಾರ ಬಂದ ನಂತರ ಮತ್ತೆ ಬಿ.ಎಸ್. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು. ಜೆಡಿಎಸ್ ರಾಜ್ಯಾಧ್ಯಕ್ಷ ರಾಜಿನಾಮೆ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಅವರು ಈ ಬೆಳವಣಿಗೆ ಎಂದೋ ಆಗಬೇಕಿತ್ತು ಎಂದರು.

ಹತಾಷೆಯಿಂದ ಇವಿಎಂ ಬಗ್ಗೆ ಮಾತಾಡ್ತಾರೆ…
ಇನ್ನು ಚುನಾವಣ ಪ್ರಕ್ರಿಯೆ ಬಗ್ಗೆ ನಂಬಿಕೆಯಿಲ್ಲದವರು ಮಾತ್ರವೇ ಇವಿಎಂ ಬಗ್ಗೆ ಮಾತನಾಡುತ್ತಾರೆ. ಇದೆಲ್ಲವೂ ಕೂಡ ಹತಾಷೆಯ ಪರಮಾವಧಿ. ಮತಯಂತ್ರದ ಬಗ್ಗೆ ಮಾತನಾಡುವರ ಮೇಲೆ ಚುನಾವಣಾ ಆಯೋಗ ಮತ್ತು ಸುಪ್ರಿಂ ಕಠಿಣವಾಗಿ ಹೇಳಿದೆ. ಅವರು ಗೆದ್ದಲ್ಲಿ ಮತಯಂತ್ರ ಸರಿಯಿರುತ್ತೆ, ಸೋತಲ್ಲಿ ಮಾತ್ರ ಮತಯಂತ್ರದ ಬಗ್ಗೆ ಮಾತನಾಡುವುದು ಬೇಜವಬ್ದಾರಿ ಹೇಳಿಕೆಗಳು ಎಂದು ಪೂಜಾರಿ ಆಕ್ರೋಷ ವ್ಯಕ್ತಪಡಿಸಿದರು. ಇನ್ನು ರಾಹುಲ್ ಗಾಂಧಿ ನಾಯಕತ್ವ ಇನ್ನು ಫಲಿಸಲೇ ಇಲ್ಲ ಆದರೂ ಕೂಡ ಅವರು ನಾಯಕರೆಂದು ಅವರ ಪಕ್ಷದವರು ಹೇಳುತ್ತಾರೆಂದು ಲೇವಡಿ ಮಾಡಿದರು.

ಮೋದಿಯನ್ನು ಜನ ನೆಚ್ಚಿದ್ದಾರೆ…
ಕರ್ನಾಟಕದಲ್ಲಿ 22 ಕ್ಕೂ ಅಧಿಕ ಲೋಕಸಭಾ ಸ್ಥಾನ ಪಡೆಯುವ ಬಗ್ಗೆ ಈ ಹಿಂದೆಯೂ ಹೇಳಿಕೆ ನೀಡಿದ್ದು ನಿರೀಕ್ಷೆ ಮೀರಿ ಇನ್ನೂ ಅಧಿಕ ಸ್ಥಾನ ಪಡೆದಿದ್ದು ಮೋದಿಯವರ ಕಾರ್ಯಶೈಲಿಯ ಮೇಲೆ ಜನರಿಟ್ಟ ನಂಬಿಕೆಯ ಸೂಚಕವಾಗಿದೆ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೋಯ್ಲಿ, ಮುನಿಯಪ್ಪ ಅವರಂತ ನಾಯಕರ ಸೋಲು ಜನರು ಬಿಜೆಪಿ ಮೇಲಿಟ್ಟ ನಂಬಿಕೆಗೆ ಸಾಕ್ಷಿ. ರಾಷ್ಟ್ರಕ್ಕೋಸ್ಕರ ಸಮರ್ಪಣೆ ಮಾಡಿಕೊಂಡ ಮೋದಿಯಂತಹ ಮಹಾನ್ ನಾಯಕರನ್ನು ಜನರು ನೆಚ್ಚಿದ್ದಾರೆಂದರು. ಕರ್ನಾಟಕದ ಫಲಿತಾಮ್ಶದ ಬಗ್ಗೆ ಮೋದಿ ಮತ್ತು ಅಮಿತ್ ಶಾ ಮೆಚ್ಚಿದ್ದು ಕರ್ನಾಟಕದ ಸಂಸದರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಉತ್ತಮ ಸ್ಥಾನಮಾನ ನೀಡುವ ವಿಶ್ವಾಸವಿದೆ ಎಂದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.