ಉಡುಪಿ: ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಅಭ್ಯರ್ಥಿ ಹೆಸರಲ್ಲಿ ಮತ ಕೇಳದೆ ಮೋದಿಗೆ ಮತ ಹಾಕಿಯೆಂದು ಹೇಳುತ್ತಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು ದೇಶದಲ್ಲಿ ತಪ್ಪು ಸಂದೇಶ ಹೋಗುತ್ತಿದೆ. ಕೇಂದ್ರದ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳುವ ನೈತಿಕತೆಯಿಲ್ಲದಿರುವುದನ್ನು ಖಂಡಿಸುವೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.
ಕುಂದಾಪುರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಐದು ವರ್ಷಗಳಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನ ಪರ ಕೆಲಸ ಮಾಡದೇ ಜನರಿಗೂ ಸಿಗದೆ ಇದೀಗಾ ಮೋದಿ ಹೆಸರಲ್ಲಿ ಮತ ಕೇಳುತ್ತಿರುವ್ದು ಶೋಭಾ ಕೆಲಸ ಮಾಡಿಲ್ಲವೆಂಬುದನ್ನು ಅವರೇ ಒಪ್ಪಿಕೊಂಡಂತಾಗಿದೆ. ಈ ಹಿಂದೆ ಪ್ರಮೋದ್ ಮಧ್ವರಾಜ್ ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದವರು. ಮಧ್ವರಾಜ್ ಕುಟುಂಬವೂ ಕೂಡ ಜಿಲ್ಲೆಗೆ ಅಪಾರ ಕೊಡುಗೆ ನೀಡಿದೆ. ಮೀನುಗಾರರ ಸಮಸ್ಯೆ ಬಗ್ಗೆ ಬಿಜೆಪಿ ಯಾವುದೇ ತಲೆಕೆಡಿಸಿಕೊಂಡಿಲ್ಲ. ಡಿಸೆಲ್ ಸಬ್ಸಿಡಿ, ಮೀನುಗಾರರ ಪರಿಹಾರ ವಿಚಾರ, ಬಡ್ಡಿ ರಹಿತ ಸಾಲದ ವಿಚಾರದಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ. ಕೇಂದ್ರವು ನಾಪತ್ತೆಯಾದ ಮೀನುಗಾರರನ್ನು ಪತ್ತೆ ಮಾಡುವಲ್ಲಿ ಗಂಭೀರ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಹಿಂದುಳಿದ ವರ್ಗದವರಿಗೆ ಬೇರೆಬೇರೆ ಆಮಿಷವೊಡ್ಡುವ ಮೂಲಕ ಬಿಜೆಪಿ ಮತಯಾಚನೆ ಮಾಡುತ್ತಿದೆ. ಆದರೆ ಕಾರವಾರ, ಶಿವಮೊಗ್ಗ, ಉಡುಪಿ ಚಿಕ್ಕಮಗಳುರು ಹಾಗೂ ದ.ಕ. ನಾಲ್ಕು ಲೋಕಸಭಾ ಕ್ಷೇತ್ರದಲ್ಲಿ ಒಬ್ಬರೇ ಒಬ್ಬರು ಹಿಂದುಳಿದ ವರ್ಗದ ಅಭ್ಯರ್ಥಿಗೆ ಟಿಕೇಟ್ ನೀಡಿಲ್ಲ. ಮೇಲ್ವರ್ಗದವರಿಗೆ ಟಿಕೆಟ್ ನೀಡಿ ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಿದಂತಾಗಿದ್ದು ಅವರ ಮತ ಕೇಳುವ ಯಾವುದೇ ನೈತಿಕತೆಯಿಲ್ಲ. ಹಿಂದುಳಿದ ವರ್ಗದ ಮತದಾರರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯು ನಾಲ್ಕರಲ್ಲಿ ಮೂರು ಸ್ಥಾನ ಹಿಂದುಳಿದ ವರ್ಗದ ವರ್ಗದವರಿಗೆ ನೀಡಿದೆ. ಸೈನ್ಯದ ಹೆಸರಲ್ಲಿ, ರಾಮನ ಹೆಸರಿನಲ್ಲಿ, ಹಿಂದುತ್ವದ ಹೆಸರಲ್ಲಿ ಈ ಹಿಂದೆ ಓಟು ಕೇಳಿದ್ದು ಈ ಬಾರಿಯೂ ವಿವಿಧ ವಿಚಾರವಿಟ್ಟುಕೊಂಡು ಮತಯಾಚನೆ ಮಾಡಿದ್ದಾರೆ ಹೊರತು ಎಂದಿಗೂ ಅಭಿವ್ರದ್ಧಿಯೇ ವಿಚಾರಗಳನ್ನಿಟ್ಟುಕೊಂಡು ಬಿಜೆಪಿ ಮತಯಾಚನೆ ಮಾಡಿಲ್ಲ. ಕೇವಲ ಸಾವಿನಲ್ಲಿ ರಾಜಕಾರಣ ಮಾಡುತ್ತಾ ಮೊಸಳೆ ಕಣ್ಣೀರು ಹಾಕುವುದು ಬಿಜೆಪಿಯವರಿಗೆ ಚೆನ್ನಾಗಿ ಗೊತ್ತು ಎಂದು ಗೋಪಾಲ ಪೂಜಾರಿ ಆರೋಪಿಸಿದರು. ಪರೇಶ್ ಮೇಸ್ತ ಎಂಬ ಅಮಾಯಕ ಯುವಕ ಹೆಣವನ್ನಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡಿದ್ದು ಶೋಭಾ ಕರಂದ್ಲಾಜೆ ಈ ವಿಚಾರವಿಟ್ಟುಕೊಂಡು ಉತ್ತರಕನ್ನಡಕ್ಕೆ ತೆರಳಿ ಭಾಷಣ ಮಾಡಿಬಂದಿದ್ದರು. ಸಿಬಿಐಗೆ ನೀಡಿ ವರ್ಷವಾದರೂ ಇನ್ನೂ ಯಾವುದೇ ಪ್ರಯೋಜನವಾಗಿಲ್ಲ. ಪರೇಶ್ ಮೇಸ್ತ ವಿಚಾರವಿಟ್ಟು ಕರಾವಳಿಯಲ್ಲಿ ಮತ ಕೇಳಿದವರು ಮೀನುಗಾರರಿಗೆ ಉತ್ತರ ನೀಡಬೇಕಿದೆ ಎಂದರು.
ಯೋಧರ ಸಾಧನೆಗಳನ್ನು ತಮ್ಮ ಸಾಧನೆಯೆಂದು ಜನರನ್ನು ತಪ್ಪು ಮಾಹಿತಿ ನೀಡುತ್ತಿದೆ. ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡುವ ಕೆಲಸ ಮಾಡುತ್ತಿದೆ. ಮಂಗ್ಳೂರು ವಿಮಾನ ನಿಲ್ದಾಣವನ್ನು ಅದಾನಿಗೆ ಮಾರಿದ್ದು, ಬಿ.ಎಸ್.ಎನ್.ಎಲ್. ಅನ್ನು ಜಿಯೋಗೋಸ್ಕರ ಏಳು ತಿಂಗಳಿನಿಂದ ಸಂಬಳ ನೀಡುತ್ತಿಲ್ಲ. ವಿಜಯಾ ಬ್ಯಾಂಕ್ ವಿಲೀನ ಮಾಡಿ ಜನವಿರೋಧಿ ನೀತಿ ಅನುಸರಿಸಿದೆ ಎಂದು ವಾಗ್ದಾಳಿನಡೆಸಿದರು.
ಚುನಾವಣೆ ಬಳಿಕ ಗೋಪಾಲ ಪೂಜಾರಿಯಯವರನ್ನು ಎಲ್ಲಿದ್ದಿಯಪ್ಪಾ ಎಂದು ಹುಡುಕಬೇಕಾಗುತ್ತದೆಂಬ ಕುಮಾರ್ ಬಂಗಾರಪ್ಪ ಹೇಳಿಕೆ ಪ್ರತಿಕ್ರಿಯಿಸಿದ ಅವರು ಅಧಿಕಾರ ಇರಲಿ ಬಿಡಲಿ ನಾನು ಬೈಂದೂರು ಕ್ಷೇತ್ರದಲ್ಲಿಯೇ ಇದ್ದು ಜನಸೇವೆ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ ಎಂದು ಗೋಪಾಲ ಪೂಜಾರಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಪೂಜಾರಿ, ಮುಜಾಹಿದ್ ಗಂಗೊಳ್ಳಿ ಇದ್ದರು.