ಕರಾವಳಿ

ಬಿಜೆಪಿ ಅಂದ್ರೆ ಭಾರತೀಯ ಜನತಾ ಪಾರ್ಟಿನಾ ಅಥವಾ ಬ್ಯುಸಿನೆಸ್ ಜನತಾ ಪಾರ್ಟಿನಾ?: ಮಧು ಬಂಗಾರಪ್ಪ ಪ್ರಶ್ನೆ (Video)

Pinterest LinkedIn Tumblr

ಕುಂದಾಪುರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಗೆದ್ದವರು ಹೆಸರು ಉಳಿಸಿಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ವಿರುದ್ದ ಅಲೆ ಇದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿ‌ಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

ಅವರು ಭಾನುವಾರ ಮರವಂತೆಯ ಸಾಧನ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ರೈತರು, ಬಡವರು, ಯುವಕರನ್ನು ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಕೊಟ್ಟ ಭರವಸೆಗಳನ್ನು ಇದುವರೆಗೆ ಈಡೇರಿಸಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ರಾಜ್ಯದ ಜನತೆಗೆ ಕೊಟ್ಟಿರುವ ಜನಪರ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಎಲ್ಲಾ ವರ್ಗದ ಜನರಿಗೆ ನ್ಯಾಯ ಕೊಡಿಸಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರಾವಳಿಯ ಮೂರು ಸೀಟುಗಳು ಕಾಂಗ್ರೆಸ್-ಜೆಡಿ‌ಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳ ಪಾಲಾಗಲಿದೆ. ಮತದಾರರು ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್-ಜೆಡಿ‌ಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ವಿಶ್ವಾಸ ಇದೆ ಎಂದರು.
೨ ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದ ಮೋದಿಯವರಿಗೆ ಈವರೆಗೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ೧೫ ಲಕ್ಷ ರೂ. ಜಮೆ ಮಾಡುವುದಾಗಿ ಹೇಳಿದ್ದರೂ ಈ ಬಗ್ಗೆ ಮಾತನಾಡುತ್ತಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಕಳೆದ ೧೫ ವರ್ಷದಿಂದ ಹೇಳುತ್ತಾ ಬಂದಿರುವ ಬಿಜೆಪಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸುತ್ತಿದೆ. ಪ್ರಧಾನಿ ಮೋದಿಯವರು ಈ ದೇಶದ ಆರ್ಥಿಕ ಸ್ಥತಿಯನ್ನು ವ್ಯವಸ್ಥಿತವಾಗಿ ಹಾಳು ಮಾಡಿದ್ದಾರೆ. ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡುವ ಬದಲು ಉದ್ಯಮಿಗಳ ೪.೫ ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಇದನ್ನೆಲ್ಲಾ ಅವಲೋಕಿಸಿದಾಗ ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿನಾ ಅಥವಾ ಬ್ಯುಸಿನೆಸ್ ಜನತಾ ಪಾರ್ಟಿನಾ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.

ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಗೊಂದಲಗಳಿದ್ದರೂ ಅದನ್ನು ಸರಿಪಡಿಸಿ ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿ‌ಎಸ್ ಒಂದಾಗು ಚುನಾವಣೆ ಎದುರಿಸುತ್ತಿದೆ. ಜಿಲ್ಲೆಯಲ್ಲಿರುವ ಮರಳು ಸಮಸ್ಯೆ ಪರಿಹಾರಕ್ಕೆ ಮರಳು ನೀತಿಯನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಮುಖ್ಯಮಂತ್ರಿಗಳು ಸಿದ್ಧತೆ ನಡೆಸಿದ್ದಾರೆ. ಜನರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿ ನರೇಂದ್ರ ಮೋದಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದು, ಇಂತಹ ಡೋಂಗಿ ಕೆಲಸ ಈ ಬಾರಿ ನಡೆಯುದಿಲ್ಲ. ಜನರ ಪರವಾಗಿರುವ ಕಾಂಗ್ರೆಸ್-ಜೆಡಿ‌ಎಸ್ ಪರ ಮತದಾರರು ಮತ ಚಲಾಯಿಸಿ ಬಹುದೊಡ್ಡ ಬದಲಾವಣೆಯಲ್ಲಿ ಈ ರಾಜ್ಯದಲ್ಲಿ ದೇಶದಲ್ಲಿ ತರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಜಿಪಂ ಸದಸ್ಯೆ ಗೌರಿ ದೇವಾಡಿಗ, ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ, ಪ್ರದೀಪಕುಮಾರ್ ಶೆಟ್ಟಿ, ಮದನ ಕುಮಾರ್, ಪ್ರಕಾಶ್ಚಂದ್ರ ಶೆಟ್ಟಿ, ಜೆಡಿ‌ಎಸ್ ಮುಖಂಡರಾದ ಸಂದೇಶ ಭಟ್, ಮನ್ಸೂರ್ ಇಬ್ರಾಹಿಂ, ರವಿ ಶೆಟ್ಟಿ ಬೈಂದೂರು, ಶ್ರೀಕಾಂತ ಅಡಿಗ ಮತ್ತಿತರರು ಉಪಸ್ಥಿತರಿದ್ದರು.

Comments are closed.