ಕರಾವಳಿ

ಕುಂದಾಪುರದ ಮೊಳಹಳ್ಳಿಯ ಅಕ್ರಮ ಮರಳು ದಂಧೆಕೋರರಿಗೆ ಬಿಸಿ ಮುಟ್ಟಿಸಿದ ಕಾರ್ಕಳ ಎ.ಎಸ್‌ಪಿ ಕೃಷ್ಣಕಾಂತ್

Pinterest LinkedIn Tumblr

ಕುಂದಾಪುರ/ಉಡುಪಿ: ಜಿಲ್ಲೆಯ ಎಲ್ಲೆಡೆ ಮರಳುಗಾರಿಕೆ ನಿಂತರೂ ಕುಂದಾಪುರದ ಕೆಲವೆಡೆ ನಾನ್ ಸ್ಟಾಪ್ ಆಗಿ ನಡೆಯುತ್ತದೆ. ಅದರಲ್ಲಿ ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿ ಸಮೀಪದ ಮೊಳಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಮೊಳಹಳ್ಳಿ ಕೂಡ ಒಂದೆಂಬುದು ಎಲ್ಲರಿಗೂ ತಿಳಿದಿರೋ ವಿಚಾರ. ಇಲ್ಲಿ ಅಕ್ರಮ ಮರಳುಗಾರಿಕೆ ವರ್ಷಗಳಿಂದಲೂ ನಡೆದು ಬರುತ್ತಿದೆ. ಅಕ್ರಮ ಮರಳುಗಾರಿಕೆ ಎಂದರೆ ತಟ್ಟನೆ ನೆನಪಾಗೋದು ಮೊಳಹಳ್ಳಿ ಎನ್ನುವ ಊರು. ಆವಾಗ-ಈವಾಗ ಕೆಲವು ದಾಳಿ ನಡೆದರೂ ಮತ್ತೆ ನಾಯಿಕೊಡೆಯಂತೆ ಈ ಅಕ್ರಮ ಮತ್ತೆ ಎಗ್ಗಿಲ್ಲದೇ ಸಾಗುತ್ತೆ. ಅಂತ ಪ್ರದೇಶಕ್ಕೆ ಮಾ.3 ಭಾನುವಾರ ತಡರಾತ್ರಿ ದಾಳಿ ನಡೆಸಿದ್ದು ಕಾರ್ಕಳ ಎ.ಎಸ್‌ಪಿ (ಅಸಿಸ್ಟೆಂಟ್ ಸೂಪರಿಟೆಂಡೆಂಟ್ ಆಫ್ ಪೊಲೀಸ್) ಕೃಷ್ಣಕಾಂತ್.

ಭಾನುವಾರ ತಡರಾತ್ರಿ ನಡೆದ ಆ ದಿಡೀರ್ ದಾಳಿ ಅಕ್ಷರಶಃ ಮರಳು ದಂಧೆ ಮಾಡುತ್ತಿದ್ದ ಆ ದಂಧೆಕೋರರನ್ನು ನಡುಗಿಸಿತ್ತು. ಉಡುಪಿ ಜಿಲ್ಲೆಗೆ ಬಂದ ನೂತನ ಎಸ್‌ಪಿ ನಿಶಾ ಜೇಮ್ಸ್ ಅವರಿಗೆ ಬಂದ ದೂರುಗಳ ಪೈಕಿ ಅಕ್ರಮ ಮರಳುಗಾರಿಕೆ ಬಗ್ಗೆ ಹಲವು ದೂರುಗಳಿತ್ತು. ಅದರಲ್ಲಿ ಮೊಳಹಳ್ಳಿ ಭಾಗದ ಅಕ್ರಮ ಮರಳುಗಾರಿಕೆ ವಿಚಾರದಲ್ಲಿಯೂ ಜನರಿಂದ ದೂರು ಬಂದಿದ್ದವು. ಅಂತೆಯೇ ಎಸ್‌ಪಿ ನಿಶಾ ಜೇಮ್ಸ್ ಈ ಬಗ್ಗೆ ಸೂಕ್ತ ಕ್ರಮಕ್ಕೂ ಕೂದ ಮುಂದಾಗಿದ್ದರು. ಮೊಳಹಳ್ಳಿಯ ಕೈಲ್ಕೆರೆ ಎಂಬಲ್ಲಿ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದೆಯೆಂಬ ಖಚಿತ ವರ್ತಮಾನ ಸಿಗುತ್ತಿದ್ದಂತೆಯೇ ಕಾರ್ಕಳ ಎ.ಎಸ್‌ಪಿ ಪಿ. ಕೃಷ್ಣಕಾಂತ್ ನೇತೃತ್ವದಲ್ಲಿ ಒಂದು ತಂಡ ಮಾಡಿ ಕಾರ್ಯಾಚರಣೆ ನಡೆಸಿಯೇ ಬಿಟ್ಟಿದ್ದರು.

(ಎಸ್‌ಪಿ ನಿಶಾ ಜೇಮ್ಸ್)

(ಕಾರ್ಕಳ ಎ.ಎಸ್‌ಪಿ ಪಿ. ಕೃಷ್ಣಕಾಂತ್)

ಅಕ್ರಮ ಮರಳುಗಾರಿಕೆ ಪ್ರದೇಶಕ್ಕೆ ದಾಳಿ ನಡೆಸಿದ ಈ ವೇಲೆಯಲ್ಲಿ 10 ದೋಣಿ, 1 ಲಾರಿ, 2 ಕಾರು ವಶಕ್ಕೆ ಸಿಕ್ಕಿದ್ದಲ್ಲದೇ ಮರಳು ತೆಗೆಯುವ ಕಾರ್ಮಿಕರೂ ಸೇರಿ ಅಕ್ರಮದಲ್ಲಿ ತೊಡಗಿಸಿಕೊಂಡ ಹತ್ತಕ್ಕೂ ಅಧಿಕ ಮಂದಿಯನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಹೇಶ್, ಕೋಟ ಪಿಎಸ್ಐ ನರಸಿಂಹ ಶೆಟ್ಟಿ ಹಾಗೂ ಸಿಬ್ಬಂದಿಗಳು ಭೇಟಿ ಮಹಜರು ಕಾರ್ಯ ನಡೆಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ದಂಧೆಕೋರರ ಪಾಲಾಗುತ್ತಿದೆ ಮರಳು!
ಜಿಲ್ಲೆಯಲ್ಲಿ ಮರಳು ನಿಂತು ವರ್ಷಗಳೇ ಕಳೆದರೂ ಈ ಸಮಸ್ಯೆ ಪರಿಹಾರ ಮಾಡುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಚ್ಚಾಶಕ್ತಿ ತೋರುತ್ತಿಲ್ಲ. ಐಷಾರಾಮಿ ಮನೆಗಳು, ವಾಣಿಜ್ಯ ಕಟ್ಟಡಗಳು ವ್ಯಾಪಕವಾಗಿ ತಲೆ ಎತ್ತುತ್ತಿದ್ದರೂ ಕೂಡ ಬಡವನೊಬ್ಬನಿಗೆ ಕಿಂಚಿತ್ತೂ ಮರಳು ಸಿಗುತ್ತಿಲ್ಲ. ಮರಳು ದಂಧೆಕೋರರು ಎಗ್ಗಿಲ್ಲದೇ ರಾತ್ರಿ ಮರಳುಗಾರಿಕೆ ನಡೆಸುತ್ತಿದ್ದಾರೆ. ಕಾಳ ಸಂತೆಯಲ್ಲಿ ಈ ಮರಳು ಪಡೆಯಲು ಮಾರುಕಟ್ಟೆ ದರಕ್ಕಿಂತಲೂ ಮೂರ್ನಾಲ್ಕು ಪಟ್ಟು ಅಧಿಕ ಹಣ ಕೊಟ್ಟು ಖರೀದಿ ಮಾಡಬೇಕಾದ ಅನಿವಾರ್ಯತೆ ಇದ್ದು ಈ ಬಗ್ಗೆ ಸ್ಪಂದಿಸಬೇಕಾದವರು ಮರಳು ದಂಧೆಕೋರರ ಪರವಾಗಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.