ರಾಷ್ಟ್ರೀಯ

ಮಾಯಾವತಿಯ ಹುಟ್ಟುಹಬ್ಬಕ್ಕಾಗಿ ತಂದಿದ್ದ 63 ಕೆ.ಜಿ. ಕೇಕ್ ನೋಡುನೋಡುತ್ತಿದ್ದಂತೆ ಮಾಯ!, ವಿಡಿಯೋ ವೈರಲ್​

Pinterest LinkedIn Tumblr

ಲಖನೌ : ವೇದಿಕೆಯ ಮೇಲೆ ಬೃಹದಾಕಾರದ ಕೇಕ್​ ಇಡಲಾಗಿತ್ತು. ಆ ಕೇಕ್​ನ ತೂಕ ಬರೋಬ್ಬರಿ 63 ಕೆ.ಜಿ.. ಕೇಕ್​ ತಂದಿಡುತ್ತಿದ್ದಂತೆ ಅಲ್ಲಿದ್ದವರು ಕೇಕ್​ ಮೇಲೆ ಮುಗಿಬಿದ್ದರು. ನಾಮುಂದು, ತಾಮುಂದು ಎಂದು ಕೇಕ್​ ಖಾಲಿ ಮಾಡಿಬಿಟ್ಟರು! ಕೇಕ್​ ಕತ್ತರಿಸುವ ಮೊದಲೇ ಮಾಯಾವಾಗಿತ್ತು. ಈ ದೃಶ್ಯ ಕಂಡು ಬಂದಿದ್ದು ಬಹುಜನ ಸಮಾಜ ಪಾರ್ಟಿ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ ಜನ್ಮದಿನಾಚರಣೆಯ ಸಂಭ್ರಮದಲ್ಲಿ!

ಮಾಯಾವತಿ ಮಂಗಳವಾರ 63ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿ ಅವರು ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದರು. ಆದರೆ, ಬಿಎಸ್​ಪಿ ಕಾರ್ಯಕರ್ತರು ನೆಚ್ಚಿನ ನಾಯಕಿಯ ಹುಟ್ಟುಹಬ್ಬವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲು ನಿರ್ಧರಿಸಿದ್ದರು. ಅದಕ್ಕಾಗಿ ಬರೋಬ್ಬರಿ 63 ಕೆ.ಜಿ ತೂಕದ ಕೇಕ್​ ತಂದಿದ್ದರು. ಬಿಎಸ್​ಪಿ ಮುಖ್ಯಸ್ಥೆಯ ಹುಟ್ಟುಹಬ್ಬ ಆಚರಣೆಗೆ ಸಾಕ್ಷಿಯಾಗಲು ಸಾಕಷ್ಟು ಜನರು ಸೇರಿದ್ದರು.

ಕಾರ್ಯಕ್ರಮ ಆಯೋಜಕರು ವೇದಿಕೆಯ ಮೇಲೆ ಕೇಕ್​ ತಂದಿಟ್ಟರು. ಅದನ್ನು ಕತ್ತರಿಸಲು ಇನ್ನೂ ಸಮಯವಿತ್ತು. ಆದರೆ, ವೇದಿಕೆಯ ಕೆಳಗಿದ್ದವರಿಗೆ ಕೇಕ್​ ನೋಡಿ ಬಾಯಲ್ಲಿ ನೀರೂರಿತ್ತು. ಇದರ ಜೊತೆಗೆ ರಾಕ್ಷಸ ಹಸಿವು ಬೇರೆ. ಹಾಗಾಗಿ, ಒಂದಿಬ್ಬರು ಕೇಕ್​ಗೆ ಮುತ್ತಿಗೆ ಹಾಕಿದ್ದರು. ನೋಡ ನೋಡುತ್ತಿದ್ದಂತೆ 20-25 ಜರನು ಒಂದೇ ಬಾರಿಗೆ ಕೇಕ್​ ಬಾಚಿಕೊಳ್ಳಲು ಆರಂಭಿಸಿದ್ದರು. ಕ್ಷಣಮಾತ್ರದಲ್ಲಿ ಅಲ್ಲಿದ್ದ 63 ಕೆ.ಜಿ. ತೂಕದ ಕೇಕ್​ ಮಾಯವಾಗಿತ್ತು. ಭದ್ರತಾ ಸಿಬ್ಬಂದಿ ಅವರನ್ನು ತಡೆಯಲು ಮುಂದಾದರಾದರೂ ಅದು ವಿಫಲವಾಯಿತು. ಕಾರ್ಯಕ್ರಮದ ಆಯೋಜಕರು ಇದರಿಂದ ಪೇಚಿಗೀಡಾದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮತ್ತೊಂದು ಕಡೆ, ಬಿಎಸ್​ಪಿ ಶಾಸಕರು ಕಾರ್ಯಕರ್ತರಿಗೋಸ್ಕರ ನೃತ್ಯ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ವ್ಯಕ್ತವಾಗಿದೆ.

Comments are closed.