ಕರಾವಳಿ

ಕುಂದಾಪುರದ ಕಮಲಶಿಲೆಯಲ್ಲಿ ಕೋತಿ ಕಾಟ; ಕಪಿಚೇಷ್ಟೆಗೆ ಜನರು ಕಂಗಾಲು..! (ವೀಡಿಯೋ)

Pinterest LinkedIn Tumblr

ಕುಂದಾಪುರ: ಆ ಊರಿನ ಮಂದಿ ಕಪಿಚೇಷ್ಟೆಗೆ ಕಂಗಾಲಾಗಿ ಹೋಗಿದ್ದಾರೆ. ಊರಿನಲ್ಲಿ ಬೀಡುಬಿಟ್ಟ ಕೋತಿಗಳ ತಂಡ ಮಾಡುವ ಕಿರಿಕ್ ಅಷ್ಟಿಷ್ಟಲ್ಲ. ಅಕ್ಷರಶಃ ನೆಮ್ಮದಿಯನ್ನೂ ಕಳೆದುಕೊಂಡು ಭಯದಲ್ಲೇ ಬದುಕುತ್ತಿದ್ದಾರೆ ಇಲ್ಲಿನ ಜನರು. ಮರ್ಕಟ ಕಾಟಕ್ಕೆ ಇಲ್ಲಿನ ಜನರು ಸುಸ್ತಾಗಿದ್ದಾರೆ.

ತೋಟದಲ್ಲಿ ಮುರಿದು ಬಿದ್ದ ಬಾಳೆ ಮರ, ಬಾಗಿದ ಅಡಕೆ ಮರದ ಸೋಗೆ, ತೋಟದ ಸುತ್ತೆಲ್ಲಾ ಚೆಲ್ಲಾಪಿಲ್ಲೆಯಾಗಿ ಬಿದ್ದ ಎಳನೀರು ಚಿಪ್ಪು, ಕಿತ್ತು ಬಿಸುಟಿದ ತರಕಾರಿ ಗಿಡಗಳು…ಎಲ್ಲವೂ ನಾಶವಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಮಂಕಿ ಗ್ಯಾಂಗ್. ತೋಟದ ತುಂಬೆಲ್ಲಾ ಮಂಗಗಳ ಕಿತ್ತಾಟ, ಅರಚಾಟ…ಓಡಿಸಲು ಹೋದವರನ್ನೇ ಅಟ್ಟಿಸಿಕೊಂಡು ಬರುವಷ್ಟು ಭಯಾನಕವಾಗಿರೋ ಕೋತಿಗಳ ದಂಡು. ಹೌದು ಕೆಲವಾರು ಸಮಯಗಳಿಂದ ಕುಂದಾಪುರ ತಾಲೂಕಿನ ಕಮಲಶಿಲೆ ಭಾಗದಲ್ಲಿ ಕೀಟಲೆ ಕೊಡುವ ಮಂಗಗಳ ಗುಂಪೊಂದು ಬೀಡುಬಿಟ್ಟಿದೆ. ಈ ಭಾಗದ ತೋಟ ಸುತ್ತಿ ಬಂದರೆ ಮಂಗಗಳ ಕ್ರೌರ್ಯ ಕಾಣುತ್ತೆ. ವರ್ಷಕ್ಕೆ ೩೦ ಸಾವಿರ ಕಾಯಿ ಕೊಯ್ಯುತ್ತಿದ್ದ ರೈತನ ತೆಂಗಿನ ತೋಟದಲ್ಲಿ ಬಿಡುವ ಕಾಯಿ ಮನೆ ಖರ್ಚಿಗೂ ಸಾಲುತ್ತಿಲ್ಲ!.

ಹಗಲು ರಾತ್ರಿಯೂ ತೋಟದಲ್ಲೇ ಠಿಕಾಣಿ ಹೂಡುವ ಮಂಗಗಳ ಕೂಗಾಟ, ಹೊಡೆದಾಟದ ಕಿರುಚುವ ಧ್ವನಿ ಬೆಚ್ಚಿಬೀಳಿಸುತ್ತೆ. ಇನ್ನೂ ಮಂಗಗಳು ಸಿಕ್ಕಾಪಟ್ಟೆ ಚೀರಾಟ ನಡೆಸಿದರೆ ಅಪಶಕುನ ಎಂಬ ನಂಬಿಕೆ ಇರೋದ್ರಿಂದ ಊರಿಗೆ ಮುಂದೇನು ಕಾದಿದೆಯೋ ಇನ್ನುವ ಭಯ ಕೂಡಾ ಇದೆ. ಅಷ್ಟಲ್ಲದೇ ಹುಲಿ ಕಂಡರೆ ಮಂಗಗಳು ಹೆಚ್ಚು ಕಿರುಚುತ್ತವೆ ಎನ್ನೋ ನಂಬಿಕೆಯೂ ಇರೋ ಕಾರಣ ಕಮಲಶಿಲೆ ಸುತ್ತಾಮುತ್ತ ಹುಲಿ ಇದೆಯಾ ಎಂಬ ಅನುಮಾನವೂ ಇಲ್ಲಿನ ಜನರದ್ದು ಎನ್ನುತ್ತಾರೆ ಇಲ್ಲಿನ ನಿವಾಸಿ ಪೂರ್ಣಿಮಾ ಎನ್. ಭಟ್ಟ ಕಮಲಶಿಲೆ.

ಮಂಗಳ ಕಾಟ ಕೃಷಿಕರಿಗೆ ಸ್ಥಳೀಯರಿಗೆ ಸೀಮಿತವಲ್ಲ.. ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರನ್ನೂ ಬಿಡೋದಿಲ್ಲಾ. ಹಳ್ಳಿಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿದ ಗ್ರಾಮಗಳಲ್ಲಿ ಮಂಗಗಳ ಕಾಟವಿದ್ರೂ ಕಮಲಶಿಲೆಯಲ್ಲಿ ಕಪಿಕಾಟ ಬಹಳ ಜಾಸ್ಥಿ. ಈ ಕಪಿ ಸೈನ್ಯದಲ್ಲಿ ಐವತ್ತರಿಂದ ನೂರು ಕೋತಿಗಳಿದ್ದು ಇಂತಹ ಮೂರ್ನಾಲ್ಕು ಸೈನ್ಯವಿದೆ. ಈ ಕಪಿಸೈನ್ಯದ ನಡುವೆ ಎಲ್ಲಾದರೂ ಹೊಡೆದಾಟ ಶುರುವಾದರೆ, ಕಮಲಶಿಲೆ ಇಡೀ ವಾತಾವರಣ ಹಾಳಾಗುತ್ತೆ. ಮಂಗ ಮಾರುತಿಯ ಅಪರವತಾರವೆಂಬ ನಂಬಿಕೆಯಿಂದ ಯಾರೂ ಹೊಡೆಯಲ್ಲ. ಕಾಡು ಪ್ರಾಣಿಗಳ ಹೊಡೆದರೆ ಕಾನೂನು ಸುಮ್ಮನಿರೋಲ್ಲ ಎನ್ನುವ ಭಯ ಕೂಡಾ ಕಾಡು ಪ್ರಾಣಿಗಳ ಉಪಟಳ ಹೆಚ್ಚಿಸಿದೆ.

ಮೊದಲೆಲ್ಲ್ಲಾ ಪಟಾಕಿ, ಗರ್ನಾಲ್ ಸಿಡಿಸಿದರೆ ಪರಾರಿ ಆಗುತ್ತಿದ್ದ ಮಂಗಗಳು ಈಗ ಅದಕ್ಕೂ ಕ್ಯಾರೇ ಅನ್ನಲ್ಲ. ಒಂದೆಡೆ ಕೃಷಿಗೆ ಕಾರ್ಮಿಕ ಸಮಸ್ಯೆ, ಮಾರುಕಟ್ಟೆ ಧಾರಣೆ ಏರಿಳಿತ, ಬೇರು ಹುಳು ಕಾಟ. ಇನ್ನೊಂದೆಡೆ ಕಾಡುಕೋಣ, ಜಿಂಕೆ, ಕಣೆಹಂದಿ, ಹಂದಿ, ಮಂಗಗಳ ಕಾಟ. ಅರಣ್ಯ ಇಲಾಖೆಗೆ ಮನವಿ ಮಾಡಿದರೆ ಪ್ರಯೋಜನಕ್ಕೆ ಬರೋದಿಲ್ಲ. ಇನ್ನು ಪರಿಹಾರದ ಮಾತು ಮರೀಚಿಕೆ. ಅರಣ್ಯ ಇಲಾಖೆ ತಕ್ಷಣ ಮಂಗಗಳ ಹಿಡಿದು ದಟ್ಟಾರಣ್ಯಕ್ಕೆ ಬಿಡುವ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಇಲ್ಲಿನ ಹಿರಿಯ ಕೃಷಿಕ ನಾಗಭೂಷಣ ಭಟ್.

ಒಟ್ಟಿನಲ್ಲಿ ಮಂಗಗಳ ಧಾಂಗುಡಿಯಿಂದ ಕಮಲಶಿಲೆ ರೈತರು ಮತ್ತು ಜನರ ನೆಮ್ಮದಿಯೇ ಹಾಳಾಗಿ ಹೋಗಿದೆ.ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.

(ಚಿತ್ರ, ವರದಿ-ಯೋಗೀಶ್ ಕುಂಭಾಸಿ)

Comments are closed.