ಕರಾವಳಿ

ಸಿದ್ದಾಪುರದ 108ಕ್ಕೆ ಸಮಸ್ಯೆ ನೂರೆಂಟು; ಈ 108 ಹತ್ತಿದ್ರೆ ರೋಗಿಗಳು ಸುಸ್ತೋಸುಸ್ತು! (Video)

Pinterest LinkedIn Tumblr

ಕುಂದಾಪುರ: ಸರಕಾರದ ಕೆಲವು ಯೋಜನೆಗಳು ನಿರ್ವಹಣೆಯಿಲ್ಲದೇ ಎಷ್ಟರ ಮಟ್ಟಿಗೆ ಹಳ್ಳ ಹಿಡಿಯುತ್ತದೆ ಎನ್ನುವುದಕ್ಕೆ ಇಲ್ಲೊಂದು ಜ್ವಲಂತ ಸಾಕ್ಷಿಯಿದೆ. ಆರೋಗ್ಯಭಾಗ್ಯ ಹೆಸರಿನಲ್ಲಿ ಕಳೆದ 10 ವರ್ಷಗಳ ಹಿಂದೆ ಜಾರಿಗೆ ಬಂದ ಯೋಜನೆಯೇ 108 ವ್ಯವಸ್ಥೆ. ಕೆಲವಾರು ಕಡೆ 108 ಆಂಬುಲೆನ್ಸ್ ವಾಹನದ ನಿರ್ವಹಣೆಯಿಲ್ಲದೇ ಸೊರಗಿಹೋಗಿದೆ.

ತಾಲೂಕಿನ ಸಿದ್ದಾಪುರವನ್ನು ಕೇಂದ್ರವಾಗಿಸಿಕೊಂಡು ನಕ್ಸಲ್ ಪೀಡಿತ ಪ್ರದೇಶವೂ ಸೇರಿದಂತೆ ಈ ಭಾಗದ ರೋಗಿಗಳನ್ನು ಕರೆದೊಯ್ಯಲು ಇರುವ 108 ಆಂಬುಲೆನ್ಸ್ ವಾಹನ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದಿದೆ. ಸೂಕ್ತ ಲಾಕ್ ಇಲ್ಲದೇ ಹಿಂಬದಿಯ ಬಾಗಿಲು (ಡೋರ್)ತೆರೆದುಕೊಳ್ಳುತ್ತೆ. ಅದಕ್ಕಾಗಿಯೇ ಲಾಕ್ ಬದಲು ಹಗ್ಗದಿಂದ ಡೋರ್ ಕಟ್ಟಬೇಕು. ವಾಹನದಲ್ಲಿ ಎಸಿ ಇಲ್ಲ, ಹೆಡ್ ಲೈಟ್ ಸರಿಯಾಗಿಲ್ಲ. 10 ವರ್ಷದಲ್ಲಿ 10 ಲಕ್ಷ ಕಿ.ಮೀ.ಗೂ ಜಾಸ್ಥಿ ಓಡಿದ 108 ಅಂಬುಲೆನ್ಸ್ ವಾಹನಕ್ಕೆ ಆರ್.ಟಿ.ಓ. ಅನುಮತಿ ನೀಡಿದೆ!

ಸಿದ್ದಾಪುರದ ಅಂಬೂಲೆನ್ಸ್ ಯಾದಗಿರಿಗೆ ಹೋಯಿತು,ಯಾದಗಿರಿಯಲ್ಲಿ ಓಡಿ ಗುಜರಿಯಾದ 108 ಸಿದ್ದಾಪುರಕ್ಕೆ ಬಂತು! 108 ಚಾಲಕ, ಸಿಬ್ಬಂದಿ ಬಗ್ಗೆ ಪರಿಸರದಲ್ಲಿ ಒಳ್ಳೆಯ ಹೆಸರಿದೆ. ಇರೋದ್ರಲ್ಲೇ ಉತ್ತಮ ಸೇವೆ ಕೊಡುತ್ತಿದ್ದಾರೆ. ಆದರೆ ಗಾಡಿಯೇ ಸರಿಯಿಲ್ಲ. ಸಿದ್ದಾಪುರ 108 ಅಂಬೂಲೆನ್ಸಿನಲ್ಲಿ ಮೂರಕ್ಕೂ ಹೆಚ್ಚು ಹೇರಿಗೆ ಆಗಿದೆ.

ಹೇಳಿಕೇಳಿ ಈ ಭಾಗ ನಕ್ಸಲ್ ಪೀಡಿತ ಪ್ರದೇಶವಾಗಿದ್ದು ಹೊಸಂಗಡಿ, ಸಿದ್ದಾಪುರ, ಹಳ್ಳಿಹೊಳೆ, ಆಜ್ರಿ, ಜನ್ಸಾಲೆ, ಯಡಮೊಗೆ, ಅಮಾಸೆಬೈಲು ಭಾಗದ ರೋಗಿಗಳಿಗೆ ಈ ಗುಜರಿ ವಾಹನವೇ ಆಸರೆ.ಈ ಗುಜರಿ 108 ಹತ್ತೋರಿಗೆ ಆಗುತ್ತೆ ಸಂಕಟ ತಪ್ಪಿದ್ದಲ್ಲ. ಸಂಬಂದಪಟ್ಟವರಿಗೆ ತಿಳಿಸಿದ್ರೂ ಯಾವ ಪ್ರಯೋಜನವಿಲ್ಲದಿದ್ದು ಹಾರಿಕೆ ಉತ್ತರ ನೀಡುವ ಅಧಿಕಾರಿಗಳು ಅಪಾಯಕ್ಕೂ ಮೊದಲು ಈ ಸಮಸ್ಯೆ ಬಗೆಹರಿಸುವರೇ ಕಾದುನೋಡಬೇಕಿದೆ.

(ಚಿತ್ರ,ವರದಿ- ಯೋಗೀಶ್ ಕುಂಭಾಸಿ)

Comments are closed.