ಕರಾವಳಿ

‘ಆಪರೇಶನ್ ಗೂಳಿ’; ಸಾಹಸ ಮೆರೆದು ಮೂಕ ಪ್ರಾಣಿಗೆ ಚಿಕಿತ್ಸೆ ಕೊಡಿಸಿದ ಯುವಕರು! (Video)

Pinterest LinkedIn Tumblr

ಕುಂದಾಪುರ: ಕೋಡುಗಳಿಗೆ ಹಗ್ಗ ಬಿಗಿದು ಗಾಯಗೊಂಡ ಗೂಳಿಯನ್ನು ಸಾಹಸಮಯವಾಗಿ ಹಿಡಿದು ಅದಕ್ಕೆ ಚಿಕಿತ್ಸೆ ನೀಡಿದ ಘಟನೆ ಕುಂದಾಪುರದಲ್ಲಿ ನಡೆದಿದೆ. ಕೆಲವು ತಿಂಗಳುಗಳಿಂದ ತೀವ್ರವಾಗಿ ಗಾಯಗೊಂಡ ಆ ಗೂಳಿಯನ್ನು ಹಿಡಿಯಲು, ಸಂಬಂಧಪಟ್ಟ ಇಲಾಖೆಗೆ ಸಾಕಷ್ಟು ಮನವಿಯನ್ನು ಮಾಡಿಕೊಂಡರೂ ಕೂಡ ಒಂದು ಬಾರಿ ಗೂಳಿಯನ್ನು ಹಿಡಿಯಲು ಯತ್ನಿಸಿದ ಇಲಾಖೆ ಸುಮ್ಮನಾಗಿತ್ತು. ಆದರೇ ಹಿಂದೂ ಸಂಘಟನೆಯ ಯುವಕರ ತಂಡ, ಗಾಯಗೊಂಡಿರುವ ಗೂಳಿಯ ರಕ್ಷಣೆಗೆ ಮುಂದಾಗಿ ಯಶಸ್ವಿಯಾಗಿದೆ.

ತೀವ್ರವಾಗಿ ಗಾಯಗೊಂಡು ಕುಂದಾಪುರದ ಆಸುಪಾಸಿನಲ್ಲಿ ಸುಳಿದಾಡುತ್ತಿದ್ದ ಗೂಳಿಯನ್ನೂ ಹಿಡಿಯಲು ಊರಿಗೆ ಊರೆ ಪ್ರಯತ್ನ ಪಟ್ಟಿತಾದರೂ ಆ ಚಾಲಾಕಿ ಗೂಳಿ ಮಾತ್ರ ಕೈಗೆ ಸಿಕ್ಕಿಲ್ಲ. ಒಂದೆಡೆ ತನಗಗುವ ನೋವು..ಇನ್ನೊಂದೆಡೆ ಭಯದಿಂದ ಅದು ಮನುಷ್ಯರಿಂದ ದೂರವೇ ಸಾಗಿತ್ತು. ಈ ಗೂಳಿಯನ್ನು ಹಿಡಿದು ಚಿಕಿತ್ಸೆ ಕೊಡಿಸಲು ಆ ಯುವಕರ ತಂಡ 15 ದಿನಗಳಿಂದ ರಾತ್ರಿ ಹಗಲು ಎನ್ನದೇ ನಿರಂತರವಾಗಿ ಶ್ರಮಿಸುತ್ತಿದ್ದರು.

ಸಿನಿಮೀಯವಾಗಿ ಸೆರೆ!
ಗೂಳಿಯ ತಲೆಯ ಭಾಗದಲ್ಲಾಗಿರುವ ಗಾಯ ಅದಾಗಲೆ ದುರ್ವಾಸನೆ ಬೀರುತ್ತಿತ್ತು. ಆ ಗಾಯಕ್ಕೆ ನಿರಂತರ ಮಳೆ ನೀರು ಬಿಳುವುದರಿಂದ ಆ ಗಾಯ ಉಲ್ಬಣಗೊಂಡು ಅಕಸ್ಮಾತ್ ಆ ಗೂಳಿಗೆ ಇನ್ನಷ್ಟು ಗಾಯ ಹೆಚ್ಚಾಗುವ ಸಂಭವವಿತ್ತು. ಶತಾಯಗತಾಯ ಗೂಳಿಯನ್ನು ಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಲೇಬೇಕು ಎಂಬ ಉದ್ದೇಶದಿಂದ ಯುವಕರ ತಂಡ ಹೊಸ ಪ್ರಯತ್ನಕ್ಕೆ ಕೈ ಹಾಕಿತ್ತು. ರಸ್ತೆಯ ಪಕ್ಕದಲ್ಲಿ ಮೇಯುತ್ತಿದ್ದ ಆ ಗೂಳಿಯನ್ನು ಗಮನಿಸಿದ ಆ ತರುಣರ ತಂಡದಲ್ಲಿನ ಇಬ್ಬರು ಯುವಕರು ಬೈಕ್ ಮುಕಾಂತರ ಗೂಳಿಯ ಸಮೀಪ ಹೋಗುತ್ತಾರೆ. ಹಿಂಬದಿಯಲ್ಲಿ ಕುಳಿತ ಯುವಕ ಆ ಗೂಳಿಯ ಕುತ್ತಿಗೆಗೆ ಗುರಿಯಿಟ್ಟು ರೋಪ್ ಎಸೆಯುತ್ತಾರೆ..

ಸೆರೆಸಿಕ್ಕ ಗೂಳಿಗೆ ಶುಶ್ರೂಷೆ!
ಆ ದೈತ್ಯ ಗೂಳಿ ಕೊನೆಗೂ ಯುವಕರ ಚಾಣಾಕ್ಯ ತಂತ್ರಕ್ಕೆ ಸೆರೆಯಾಯಿತು. ಸೆರೆಸಿಕ್ಕ ಗೂಳಿಗೆ ಸೂಕ್ತ ಚಿಕಿತ್ಸೆ ನೀಡಿ, ಶುಷ್ರೂಷೆ ಕೊಡಲಾಗಿದೆ. ಪಶು ವೈದ್ಯರು ಆಗಮಿಸಿ ಗೂಳಿಗೆ ಚಿಕಿತ್ಸೆ ನೀಡಿದ್ದಾರೆ.

ಮೂಕ ಪ್ರಾಣಿಯ ರೋಧನೆ ಕಾಣದೇ ಅದಕ್ಕೆ ಸೂಕ್ತ ಚಿಕಿತ್ಸೆ ಕೊಡುವ ನಿಟ್ಟಿನಲ್ಲಿ ಜೀವದ ಹಂಗು ತೊರೆದು ಸಾಹಸ ಮೆರೆದ ಸಂಘಟನೆಯ ಆ ತರುಣರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕೋಟೇಶ್ವರ ಹಾಗೂ ಕುಂದಾಪುರದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕುಂದಾಪುರ ಪ್ರಖಂಡದಿಂದ ಈ ಕಾರ್ಯವಾಗಿದೆ. ಯುವಕರ ಈ ಕಾರ್ಯಕ್ಕೆ ಸ್ಥಳಿಯರು ಸಹಕರಿಸಿದರು.

ವರದಿ- ಯೋಗೀಶ್ ಕುಂಭಾಸಿ

Comments are closed.