ರಾಷ್ಟ್ರೀಯ

ಅಯಸ್ಕಾಂತ ಕದ್ದ ಆರೋಪದ ಮೇಲೆ ದಲಿತ ವ್ಯಕ್ತಿಯೊಬ್ಬರನ್ನು ಕಟ್ಟಿ ಹಾಕಿ ಹೊಡೆದು ಕೊಂದರು !

Pinterest LinkedIn Tumblr

ಅಹಮದಾಬಾದ್: ಕಳ್ಳತನದ ಆರೋಪದ ಮೇಲೆ ದಲಿತ ವ್ಯಕ್ತಿಯೊಬ್ಬರನ್ನು ಕಟ್ಟಿ ಹಾಕಿ ಹೊಡೆದು ಕೊಂದ ಹೃದಯವಿದ್ರಾವಕ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.

ಈ ಕುರಿತು ವಡ್‌ಗಾಂ ಶಾಸಕ ಜಿಗ್ನೇಶ್ ಮೇವಾನಿ ಅವರು ಟ್ವಿಟರ್‌ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ಮೃತರನ್ನು ಮುಕೇಶ್‌ ವಾನಿಯಾ ಎಂದು ಗುರುತಿಸಲಾಗಿದೆ. ಅವರ ಪತ್ನಿಯ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

‘ಹಿಂದುಳಿದ ಜಾತಿಗೆ ಸೇರಿದ ಮುಕೇಶ್‌ ವಾನಿಯಾ ಅವರನ್ನು ಫ್ಯಾಕ್ಟರಿ ಮಾಲೀಕರು ರಾಜ್‌ಕೋಟ್‌ನಲ್ಲಿ ಶೋಚನೀಯವಾಗಿ ಹೊಡೆದು ಕೊಲೆ ಮಾಡಿದ್ದಾರೆ. ಅವರ ಪತ್ನಿ ಮೇಲೂ ಹಲ್ಲೆ ನಡೆಸಲಾಗಿದೆ.’ #GujaratIsNotSafe4Dalits ಎಂಬ ಹ್ಯಾಷ್‌ಟ್ಯಾಗ್‌ ಜತೆ ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದಾರೆ.

ಐವರ ಬಂಧನ: ‘ಘಟನೆಗೆ ಸಂಬಧಿಸಿ ಕಾರ್ಖಾನೆ ಮಾಲೀಕರೊಬ್ಬರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಎಫ್‌ಐಆರ್‌ನಲ್ಲಿ ನಮೂದಿಸದೇ ಇರುವುದರಿಂದ ಬಂಧಿತರ ಹೆಸರನ್ನು ಬಹಿರಂಗಪಡಿಸಲಾಗದು. ಎಸ್‌ಸಿ/ಎಸ್‌ಟಿ ಕಾಯ್ದೆ ಅನ್ವಯ ಕೊಲೆ ಪ್ರಕರಣ ದಾಖಲಿಸಲಾಗಿದೆ. ಡಿವೈಎಸ್‌ಪಿ ದರ್ಜೆಯ ಅಧಿಕಾರಿ ತನಿಖೆ ನಡೆಸಲಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಶ್ರುತಿ ಮೆಹ್ತಾ ತಿಳಿಸಿದ್ದಾರೆ.

ನಡೆದಿದ್ದೇನು?: ಮುಕೇಶ್‌ ವಾನಿಯಾ ಮತ್ತು ಅವರ ಪತ್ನಿ ಚಿಂದಿ ಆಯುವವರಾಗಿದ್ದು ಭಾನುವಾರ ಬೆಳಿಗ್ಗೆ ರಾಜ್‌ಕೋಟ್‌ನ ಯಂತ್ರಗಳ ಬಿಡಿ ಭಾಗಗಳನ್ನು ತಯಾರಿಸುವ ಫ್ಯಾಕ್ಟರಿಯೊಂದರ ಬಳಿಯಿಂದ ಅಯಸ್ಕಾಂತವನ್ನು ಹೆಕ್ಕಿದ್ದರು ಎನ್ನಲಾಗಿದೆ. ಇದನ್ನು ನೋಡಿದ ಫ್ಯಾಕ್ಟರಿ ಕೆಲಸಗಾರರು ಅವರ ವಿರುದ್ಧ ಮಾಲೀಕರಿಗೆ ಕಳ್ಳತನ ದೂರು ನೀಡಿದ್ದಾರೆ. ಫ್ಯಾಕ್ಟರಿಯ ಮಾಲೀಕರ ಸೂಚನೆಯಂತೆ ದಲಿತ ವ್ಯಕ್ತಿ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ಸಂದರ್ಭ ವಾನಿಯಾ ಪತ್ನಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.

ಹಲ್ಲೆಗೆ ಖಂಡನೆ: ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ‘ಇದು 2016ರ ಊನಾ ಹಲ್ಲೆಗಿಂತಲೂ ಭೀಕರ ಹಲ್ಲೆಯಾಗಿದೆ’ ಎಂದು ಮೇವಾನಿ ಹೇಳಿದ್ದಾರೆ. 2016ರಲ್ಲಿ ಗೋವುಗಳನ್ನು ಕದ್ದ ಆರೋಪದಲ್ಲಿ ಊನಾದಲ್ಲಿ ನಾಲ್ವರು ದಲಿತರ ಮೇಲೆ ಹಲ್ಲೆ ನಡೆಸಲಾಗಿತ್ತು. ಇದಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ‘ಊನಾ ಪ್ರಕರಣದ ನಂತರವೂ ಗುಜರಾತ್ ಸರ್ಕಾರ ಪಾಠ ಕಲಿತಿಲ್ಲ’ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಮೇವಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.