ಮಂಗಳೂರು, ಮೇ 21: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಮಂಗಳೂರಿನಲ್ಲಿ ನಡೆದ ಸಂಭ್ರಮಾಚರಣೆ ಸಂದರ್ಭ ಕಾರ್ಯಕರ್ತರು ‘ಪಾಕಿಸ್ತಾನಕ್ಕೆ ಜೈ’ ಎಂಬ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾದ ಪ್ರಕರಣ ತಿರುವು ಪಡೆದುಕೊಂಡಿದ್ದು, ವೀಡಿಯೋವನ್ನು ತಿರುಚಿ ಕೋಮುಗಲಭೆಗೆ ಪ್ರೇರೇಪಣೆ ನೀಡಲಾಗಿದೆ ಎಂಬ ದೂರು ದಾಖಲಾಗಿದೆ.
ಕಾಂಗ್ರೆಸ್- ಜೆಡಿಎಸ್ ಸರಕಾರ ರಚಿಸುವ ಹಿನ್ನೆಲೆಯಲ್ಲಿ ಮೇ 19ರಂದು ಸಂಜೆ 5:30ಕ್ಕೆ ಕದ್ರಿ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೋ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಜಯಕಾರ ಹಾಕಿದ್ದೆವು. ಆದರೆ ಅದಕ್ಕೆ ಸಂಬಂಧಿಸಿದ ವೀಡಿಯೋವನ್ನು ತಿರುಚಿ ಕಾಂಗ್ರೆಸ್ ಪಾರ್ಟಿ ಕಿ ಜೈ ಎಂದು ಹೇಳುವ ಸ್ಥಳದಲ್ಲಿ ‘ಪಾಕಿಸ್ತಾನಕ್ಕೆ ಜೈ’ ಎಂದು ಸುಳ್ಳಾಗಿ ತಿರುಚಿ ಮಂಗಳೂರಿನ ರೂಪೇಶ್ ಶೇಟ್ ಎಂಬವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆಯ ವೀಡಿಯೋವನ್ನು ತಿರುಚಿ ಫೇಸ್‌ಬುಕ್ ಹಾಗೂ ವಾಟ್ಸ್‌ಆಯಪ್‌ನಲ್ಲಿ ಹರಿದು ಬಿಡಲಾಗಿದೆ. ಆರೋಪಿಗಳ ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಸಮರ್ಥ ಭಟ್ ಎಂಬವರು ಮಂಗಳೂರು ಪೊಲೀಸ್ ಆಯುಕ್ತರಿಗೆ ಸೋಮವಾರ ದೂರು ನೀಡಿದ್ದಾರೆ.
ಮಾತ್ರವಲ್ಲದೇ ದಿ. ಮಂಗಳೂರು ಮಿರರ್ ಎಂಬ ವೆಬ್‌ಸೈಟ್‌ನಲ್ಲಿ ಕೂಡಾ ಈ ತಿರುಚಿದ ವೀಡಿಯೋವನ್ನು ಅಪ್‌ಲೋಡ್ ಮಾಡಿ ಕೋಮು ಭಾವನೆ ಕೆರಳಿಸುವ ಬರಹಗಳನ್ನು ಬರೆಯಲಾಗಿದೆ. ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಈ ತಿರುಚಲಾದ ವೀಡಿಯೋ ಹರಿದಾಡುತ್ತಿದ್ದು, ಈ ಬಗ್ಗೆ ಕೂಡ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೋ, ಮೇಯರ್ ಭಾಸ್ಕರ್ ಕೆ., ಉಪ ಮೇಯರ್ ಕೆ.ಮುಹಮ್ಮದ್, ಪಕ್ಷದ ಪ್ರಮುಖರಾದ ಕಳ್ಳಿಗೆ ತಾರನಾಥ ಶೆಟ್ಟಿ, ಶಶಿಧರ ಹೆಗ್ಡೆ, ಟಿ.ಕೆ.ಸುಧೀರ್, ಪುರುಷೋತ್ತಮ ಚಿತ್ರಾಪುರ, ರಮಾನಂದ ಬೋಳಾರ್, ಸಂತೋಷ್ ಶೆಟ್ಟಿ, ಅಪ್ಪಿ, ಸಬಿತಾ ಮಿಸ್ಕಿತ್, ಕವಿತಾ ವಾಸು, ಪ್ರವೀಣ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.
Comments are closed.