ಕರಾವಳಿ

ಕುಂದಾಪುರದಲ್ಲಿ ಬಿಜೆಪಿ ಮೀನುಗಾರರ ಪ್ರಕೋಷ್ಠದಿಂದ ಮತ್ಸ್ಯ ಸಂಗಮ-2018

Pinterest LinkedIn Tumblr

ಕುಂದಾಪುರ: ಆ ಸಂಜೆ ಹೊತ್ತು ಕಡಲ ತೀರದಲ್ಲಿ ಸಾಗರೋಪಾದಿಯಲ್ಲಿ ಜನರು ಜಮಾಯಿಸಿದ್ರು. ಭಾನುವಾರದ ರಜಾ ಮಜದ ನಡುವೆ ಮೀನುಗಾರರ ಪ್ರಕೋಷ್ಟದ ವತಿಯಿಂದ ಕೋಟೇಶ್ವರ ಕಿನಾರಾ ಬೀಚ್ ಬಳಿ ಹಮ್ಮಿಕೊಂಡ ಮತ್ಸ್ಯ ಸಂಗಮ ಕಾರ್ಯಕ್ರಮದ ಒಂದು ಝಲಕ್ ಇದು.

ಒಂದೆಡೆ ಸಾಂಪ್ರದಾಯಿಕವಾಗಿ ಮೀನು ಹಿಡಿಯುತ್ತಿರುವ ಮೀನುಗಾರರು, ಮರಳು ಶಿಲ್ಪ ರಚಿಸುತ್ತಿರೋ ಕಲಾವಿದರು…ಗಾಳಿಪಟ ಹಾರಿ ಬಿಡುತ್ತಿರೋ ಚಿಣ್ಣರು ಹಾಗೂ ಯುವಕರು, ಬಾಯಲ್ಲಿ ನೀರೂರಿಸೋ ಮೀನು ಖಾದ್ಯಗಳನ್ನು ತಯಾರಿಸೋ ಬಾಣಸಿಗರು. ಉಡುಪಿ ಜಿಲ್ಲಾ ಮೀನುಗಾರರ ಪ್ರಕೋಷ್ಟದ ವತಿಯಿಂದ ಭಾನುವಾರದ ಸಂಜೆ ಹೊತ್ತು ಮತ್ಸ್ಯ ಸಂಗಮ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪುರುಷರಿಗಾಗಿ ಹಗ್ಗ ಜಗ್ಗಾಟ, ಮೀನುಗಾರರಿಗಾಗಿ ಮೀನು ಹಿಡಿಯುವ ಸ್ಪರ್ಧೆ, ಮರಳು ಶಿಲ್ಪ ರಚನಾ ಸ್ಪರ್ಧೆ, ಪುಟಾಣಿಗಳಿಗೆ ಚಿತ್ರಕಲೆ ಸ್ಪರ್ಧೆ ನಡೆಯಿತು. ವಿವಿಧ ಬಗೆಯ ಮೀನಿನ ಖಾದ್ಯಗಳು, ಸಿಗಡಿ ಬಿರಿಯಾನಿ ಸೇರಿದಂತೆ ಸಸ್ಯಹಾರಿ ಖಾದ್ಯಗಳು ಆಗಮಿಸಿದವರ ಹೊಟ್ಟೆ ಹಸಿವು ನೀಗಿಸಿತ್ತು. ಪಕ್ಷ ಸಂಘಟನೆ ಜೊತೆಗೆ ಕರಾವಳಿ ಭಾಗದ ಜನರಿಗೆ ಸಿಗಬೇಕಾದ ಹಕ್ಕುಗಳನ್ನು ಕೊಡಿಸಲು ಸರಕಾರಕ್ಕೆ ಒತ್ತಾಯ ಪಡಿಸುವ ಜೊತೆಗೆ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಮೀನುಗಾರರ ಪ್ರಕೋಷ್ಠವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಶಾಸಕ ಹಾಲಾಡಿ!
ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ಸ್ಯ ಸಂಗಮ ಕಾರ್ಯಕ್ರಮಕ್ಕೆ ಆಗಮಿಸಿದ್ದು ಮಾತ್ರವಲ್ಲದೇ ಮೀನು ಹಿಡಿಯುವ ಸ್ಪರ್ಧೆಯಲ್ಲಿ ಸಿಕ್ಕ ಮೀನುಗಳನ್ನು ಖರೀದಿಸಿದ್ರು. ಮೀನುಗಾರರ ಸಮಸ್ಯೆಗಳನ್ನು ಆಲಿಸಿದ್ರು. ಆದರೇ ಸಮಾರಂಭದ ವೇದಿಕೆ ಮಾತ್ರ ಏರಲಿಲ್ಲ. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಹಲವು ಮುಖಂಡರು ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು.

ಸಭಾ ಕಾರ್ಯಕ್ರಮ ಉದ್ಘಾಟನೆ..
ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆಅಧ್ಯಕ್ಷತೆ ವಹಿಸಿದ್ದರು. ಮೀನುಗಾರರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಸದಾನಂದ ಬಳ್ಕೂರು, ಜಿ.ಪಂ ಅಧ್ಯಕ್ಷ ದಿನಕರ್ ಬಾಬು, ಮುಖಂಡರಾದ ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ, ಯಶಪಾಲ್ ಸುವರ್ಣ, ಕಾಡೂರು ಸುರೇಶ್ ಶೆಟ್ಟಿ, ಶಂಕರ್ ಪೂಜಾರಿ, ಉದಯ್ ಕುಮಾರ್ ಶೆಟ್ಟಿ, ಸುರೇಶ್ ನಾಯ್ಕ್, ಶ್ಯಾಮಲಾ ಕುಂದರ್, ಜಯಶ್ರೀ ಮೊಗವೀರ, ಶ್ರೀಲತಾ ಸುರೇಶ್ ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ನಳಿನಿ ಪ್ರದೀಪ್, ಕಿರಣ್ ಕುಮಾರ್ ಕೊಡ್ಗಿ, ಸುಪ್ರಸಾದ್ ಶೆಟ್ಟಿ, ಸಂಧ್ಯಾ ರಮೇಶ್, ಜಾನಕಿ ಬಿಲ್ಲವ, ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ವೈಲೆಟ್ ಬೆರೆಟ್ಟೋ, ಸುನೀಲ್ ಶೆಟ್ಟಿ, ಮೊದಲಾದವರು ಕಾರ್ಯಕ್ರಮದಲ್ಲಿದ್ದರು.

ಸಮಾರಂಭದಲ್ಲಿ ಸಾಂಪ್ರದಾಯಿಕ ಮೀನುಗಾರಿಕ ವ್ರತ್ತಿ ಮಾಡುತ್ತಿರುವ ಹಿರಿಯರಾದ ಗುಲಾಬಿ, ನರಸಿಂಹ ಖಾರ್ವಿ, ಮಂಜು ನಾಯ್ಕ್, ಸಾಕು ಶಂಕರ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯ್ತು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಮಜಾಭಾರತ ಖ್ಯಾತಿಯ ಕಲಾವಿದರಿಂದ ನಗೆ ಹಬ್ಬವೂ ನಡೆಯಿತು.

ವರದಿ- ಯೋಗೀಶ್ ಕುಂಭಾಸಿ

Comments are closed.