ಕರಾವಳಿ

ಕುಂದಾಪುರ ಪೊಲೀಸ್ ಠಾಣೆಗೆ ಬಂತು ಮಕ್ಕಳ ಸೈನ್ಯ! (Video)

Pinterest LinkedIn Tumblr

ಕುಂದಾಪುರ: ನಿತ್ಯ ಪಾಠ ಪ್ರವಚನದಲ್ಲಿ ಶಾಲೆಯಲ್ಲಿ ಬ್ಯುಸಿ ಇರೋ ಮಕ್ಕಳು ಶಾಲೆ ಬಿಟ್ಟು ಪೊಲೀಸ್ ಸ್ಟೇಷನ್‌ಗೆ ಬಂದಿದ್ರು. ನೋಟ್ ಬುಕ್, ಪೆನ್ ಹಿಡಿಯುವ ಕೈಯಲ್ಲಿ ಪಿಸ್ತೂಲು, ಬೇಡಿ ಹಿಡಿದು ಖುಷಿ ಪಟ್ರು. ಶಾಲೆಯಲ್ಲಿ ಅದ್ಯಾಪಕರ ಪ್ರಶ್ನೆಗೆ ಉತ್ತರಿಸುತ್ತಿದ್ದ ಮಕ್ಕಳು ಠಾಣೆಯಲ್ಲಿ ಪಿ.ಎಸ್.ಐ ಅವರಿಗೆ ಪ್ರಶ್ನೆ ಕೇಳಿ ತಮ್ಮ ಕುತೂಹಲ ನೀಗಿಸಿಕೊಂಡ್ರು. ಪೊಲೀಸ್ ಠಾಣೆಗೆ ಬಂದ ಮಕ್ಕಳ ಸೈನ್ಯದ ಕುರಿತ ಒಂದು ಸ್ಟೋರಿಯಿದು.

ಈ ಪುಟಾಣಿ ಮಕ್ಕಳು ತಲ್ಲೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು. ಅಷ್ಟಕ್ಕೂ ಶಾಲೆ ಬಿಟ್ಟು ಮಕ್ಕಳು ಪೊಲೀಸ್ ಠಾಣೆಗೆ ಯಾಕೆ ಬಂದ್ರು ಅಂತಾ ಅನ್ಕೋಬೇಡಿ. ಕುಂದಾಪುರ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ, ತಾಲೂಕು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ, ಜಿಲ್ಲಾ ಶಿಕ್ಷಣ ಸಂಪ್ಮೂಲ ಕೇಂದ್ರ ಹಾಗೂ ಕುಂದಾಪುರ ಠಾಣೆ ಆಶ್ರಯದಲ್ಲಿ ಠಾಣೆಯಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ ‘ತೆರೆದ ಮನೆ’ ಹೆಸರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮವಿದು. ಶಿಸ್ತಿನಿಂದ ಹೆಜ್ಜೆ ಹಾಕುತ್ತ ಠಾಣೆಗೆ ಆಗಮಿಸಿದ ಪುಟಾಣಿಗಳು ಠಾಣೆಯ ಎಸ್.ಐ ಹರೀಶ್ ಅವರಲ್ಲಿ ಪೊಲೀಸ್ ಬಗೆಗಿರುವ ಕುತೂಹಲ, ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದರು.

ಪೊಲೀಸ್ ಅಂದರೆ ಏನು? ಲಾಠಿ ಪ್ರಹಾರ, ಎನ್-ಕೌಂಟರ್, ಗೋಲಿಬಾರ್ ಯಾವಾಗ ಮಾಡ್ತಾರೆ? ಎಫ್.ಐ.ಆರ್ ಅಂದರೇನು?, ಪೊಲೀಸರಿಗೆ ರಜೆಯೇ ಇಲ್ಲವೇ? ಶಾಲೆಯಲ್ಲಿ ಟೀಚರ್, ಮನೆಯಲ್ಲಿ ಪೋಷಕರು ಹಿಂಸೆ ಮಾಡಿದರೆ ಏನು ಮಾಡಬೇಕು? ಮಕ್ಕಳು ತಪ್ಪು ಮಾಡಿದ್ರೆ ಶಿಕ್ಷೆ ಹೇಗೆ? ಪೊಲೀಸ್ ಆಗಬೇಕಾದರೇ ಅರ್ಹತೆ ಏನು? ಪೊಲೀಸ್ ಇಲಾಖೆಯಲ್ಲಿ ಯಾವ್ಯಾವ ಹುದ್ದೆಗಳಿರುತ್ತೆ ಎನ್ನುವುದು ಮಾತ್ರವಲ್ಲದೇ ತಪ್ಪು ಮಾಡಿದ ಅಪರಾಧಿಗಳನ್ನು ಹಿಡಿಯುದು ಹೇಗೆ? ಏರೋಪ್ಲೇನ್ ಅಂದ್ರೇನು? ಆರೋಪಿಗಳನ್ನು ಹೋಡಿತೀರಾ? ಪೊಕ್ಸೋ ಕಾಯಿದೆ ಅಂದರೇನು? ಹೀಗೆ ಹತ್ತಾರು ಪ್ರಶ್ನೆಗಳಿಗೆ ವಿದ್ಯಾರ್ಥಿಗಳಾದ ವರ್ಷ, ಸಾನಿಕಾ, ರಶ್ಮಿತಾ, ಕಾವ್ಯ, ಅಪೇಕ್ಷಾ, ವೈಷ್ಣವಿ, ಶಶಾಂಕ ಮೊದಲಾದವರು ಪ್ರಶ್ನಿಸಿದರು. ಮಾತ್ರವಲ್ಲದೇ ಉಪಸ್ಥಿತರಿದ್ದ ಶಿಕ್ಷಕರಾದ ಚಂದ್ರಶೇಖರ್, ಸುಜಾತಾ, ಪ್ರೀತಾ ಕೂಡ ತಮ್ಮ ಪ್ರಶ್ನೆಗಳನ್ನು ಮುಂದಿಟ್ಟು ಎಸ್‌ಐ ಅವರಿಂದ ಉತ್ತರ ಪಡೆದರು.

ಪೊಲೀಸ್ ಸಮವಸ್ತ್ರ, ಹುದ್ದೆಗಳ ವ್ಯತ್ಯಾಸದ ಬಗ್ಗೆ ವಿವರಿಸಿದ ಠಾಣಾಧಿಕಾರಿ ಹರೀಶ್ ಆರ್. ಅವರು ಪೊಲೀಸ್ ಸಮವಸ್ತ್ರ. ಟೊಪ್ಪಿ, ಶೂ, ಬೆಲ್ಟ್ ಎಲ್ಲವೂ ಪೊಲೀಸ್ ಹುದ್ದೆಗೆ ಅನುಗುಣವಾಗಿ ಇರುತ್ತದೆ. ಕಾನ್ಸ್ಟೇಬಲ್ ನಿಂದ ಹಿಡಿದು ಆಯುಕ್ತರ ತನಕ ಡ್ರೆಸ್ ಕೋಡ್ ಬದಲಾಗುತ್ತದೆ ಎಂದು ಹೇಳಿದರು. ಮಕ್ಕಳಿಗೆ ತಮದೇ ಆದ ಹಕ್ಕುಗಳಿದ್ದು ಅದನ್ನು ತಿಳಿದುಕೊಳ್ಳಬೇಕು. ಪೊಕ್ಸೋ ಕಾಯಿದೆ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುತ್ತಿದ್ದು, ದಿಟ್ಟಿಸಿ ನೋಡಿದರೂ ಕೂಡ ಪ್ರಕರಣ ದಾಖಲಿಸಬಹುದಾಗಿದೆ ಎಂದ್ರು. ಮಕ್ಕಳಿಗೆ ಪಿಸ್ತೂಲ್, ಬಂದೂಕು ಹಾಗೂ ಬೇಡಿಯ ಬಗ್ಗೆ ವಿವರಿಸಿ ಮಕ್ಕಳ ಕೈಗೆ ಕೊಟ್ಟು ಪರಿಶೀಲಿಸುವಂತೆ ತಿಳಿಸಿದ್ರು. ಠಾಣೆಯೊಳಗಿನ ಬಂಧಿಖಾನೆ ತೋರಿಸಿದ್ರು. ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಈ ಸಂದರ್ಭ ಮಾತನಾಡಿ, ಮಕ್ಕಳು ಶಾಲೆಗೆ ಬಂದು ಹೋಗುವಾಗ ತಮಗ್ಯಾವುದೇ ಸಮಸ್ಯೆಯಾದರೇ ಹಿರಿಯರ ಗಮನಕ್ಕೆ ತನ್ನಿ. ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ ಎಂದು ಕಿವಿ ಮಾತು ಹೇಳಿದ್ರು. ತಾಲೂಕು ಸಮನ್ವಯ ವೇದಿಕೆ ಅಧ್ಯಕ್ಷ ಬಾಬು ಪೈ, ತಾಲೂಕು ಸಂಪ್ಮೂಲ ಕೇಂದ್ರ ಅಧ್ಯಕ್ಷ ನಾಗರಾಜ್ ಕಾರ್ಯಕ್ರಮದ ಬಗ್ಗೆ ತಿಳಿಸಿದ್ರು. ಅಂದ ಹಾಗೆ…ಮಕ್ಕಳಿಗೆ ಪೊಲೀಸ್ ವ್ಯವಸ್ಥೆಯ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಸುಮಾರು ಒಂದು ತಿಂಗಳಿನಿಂದ ವಿವಿದೆಡೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗ್ತಿದೆ.

ಪೊಲೀಸರೆಂದರೇ ಮಕ್ಕಳು ಭಯ ಪಡೋದು ಸಹಜ. ಆದರೇ ಆ ಭಯ ಬಿಟ್ಟು ಪೊಲೀಸರೊಡನೆ ಬೆರೆತು ಕಾನೂನು ಪಾಠ ಅರಿತರೆ ಸ್ವಸ್ಥ ಸಮಾಜಕ್ಕೆ ನಾಂದಿ ಹಾಡಬಹುದು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯ.

(ವರದಿ,ಚಿತ್ರ- ಯೋಗೀಶ್ ಕುಂಭಾಸಿ)

 

Comments are closed.