https://youtu.be/O2V-5gmBo98
ಉಜ್ಗೊರೊದ್ (ಉಕ್ರೇನ್): ಮನುಷ್ಯರೇ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡದಿರುವ ಈ ದಿನಗಳಲ್ಲಿ ಗಾಯಗೊಂಡು ನಡೆಯಲೂ ಸಾಧ್ಯವಾಗದೆ ನಿತ್ರಾಣಗೊಂಡು ಹಿಮದಿಂದ ಆವೃತವಾದ ರೈಲ್ವೆ ಹಳಿಯ ಮಧ್ಯೆದಲ್ಲಿ ಬಿದ್ದಿದ್ದ ತನ್ನ ಗೆಳತಿಯನ್ನು ನಾಯಿಯೊಂದು 2 ದಿನಗಳವರೆಗೆ ಜತನದಿಂದ ಕಾಪಾಡಿದ ಘಟನೆ ಉಕ್ರೇನ್ನಲ್ಲಿ ಘಟಿಸಿದೆ.
ಉಕ್ರೇನ್ನ ಉಜ್ಗೊರೊದ್ ಪ್ರದೇಶದ ವ್ಯಕ್ತಿಯೊಬ್ಬರು 2 ದಿನಗಳವರೆಗೆ ತನ್ನ ಗೆಳೆತಿಯನ್ನು ಕಾಪಾಡಿದ ನಾಯಿಯ ಕಥೆ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಈ ಸುದ್ದಿ ಈಗ ಸಾಕಷ್ಟು ವೈರಲ್ ಆಗಿದೆ.
ಹೆಣ್ಣು ನಾಯಿ ಗಾಯಗೊಂಡಿದ್ದರಿಂದ ನಡೆಯಲಾರದೆ ರೈಲ್ವೆ ಹಳಿಯ ಮಧ್ಯೆ ಕುಸಿದು ಕುಳಿತಿತ್ತು. ಜತೆಯಲ್ಲೇ ಇದ್ದ ಗಂಡು ನಾಯಿ ತನ್ನ ಗೆಳತಿಯನ್ನು ಬಿಟ್ಟು ಹೋಗದೆ ಭರ್ತಿ 2 ದಿನಗಳವರೆಗೆ ಮೈ ಮರಗಟ್ಟಿಸುವ ಚಳಿಯಲ್ಲಿ ತನ್ನ ಗೆಳತಿಯನ್ನು ರಕ್ಷಿಸಿದೆ. ನಾಯಿಗಳು ರೈಲ್ವೆ ಹಳಿಯ ಬಳಿ ಇರುವುದನ್ನು ಗಮನಿಸಿದ ಸ್ಥಳೀಯರು ಹತ್ತಿರ ಬಂದು ನೋಡಲು ಪ್ರಯತ್ನಿಸಿದ್ದಾರೆ, ಆದರೆ ಗಂಡು ನಾಯಿ ಹತ್ತಿರಕ್ಕೆ ಯಾರನ್ನೂ ಬರಲು ಅವಕಾಶ ನೀಡಿರಲಿಲ್ಲ. ಜತೆಗೆ ರೈಲು ಹಾದು ಹೋಗುವ ಸಂದರ್ಭದಲ್ಲಿ ಎರಡೂ ನಾಯಿಗಳೂ ಹಳಿಗಳ ಮಧ್ಯೆಯೇ ಸುರಕ್ಷಿತವಾಗಿ ಆಶ್ರಯ ಪಡೆದಿವೆ. ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಸಹ ನಾಯಿಗಳು ರೈಲ್ವೆ ಹಳಿ ಮಧ್ಯೆದಿಂದ ಹೊರಗೆ ಬರಲು ಸಾಧ್ಯವಾಗದಿದ್ದಾಗ ಸ್ಥಳೀಯರು ರಕ್ಷಣಾ ತಂಡಕ್ಕೆ ವಿಷಯ ತಿಳಿಸಿದ್ದಾರೆ. ರಕ್ಷಣಾ ತಂಡದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಾಯಿಗಳನ್ನು ರಕ್ಷಿಸಿದ್ದಾರೆ.
ನಂತರ ರಕ್ಷಣಾ ತಂಡ ನಾಯಿಗಳ ಮಾಲೀಕರ ಗುರುತು ಪತ್ತೆ ಹಚ್ಚಿದ್ದು, ಮಾಲೀಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ. ಹೆಣ್ಣು ನಾಯಿಯ ಹೆಸರು ಲೂಸಿ ಎಂದು ಮತ್ತು ಗಂಡು ನಾಯಿಯ ಪಾಂಡಾ ಎಂದು ತಿಳಿದು ಬಂದಿದೆ.
Comments are closed.