ಉಡುಪಿ: ಅಗ್ರಿಗೋಲ್ಡ್ ಅಂತರ್ ರಾಜ್ಯ ಬಹುಕೋಟಿ ಹಗರಣದ ನಾಲ್ವರು ಆರೋಪಿಗಳನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದ್ದು ಅ.5ರವರೆಗೆ ಸಿಐಡಿ ಕಸ್ಟಡಿ ನೀಡಿದೆ.
ಪ್ರಕರಣದ ಒಟ್ಟು 23 ಆರೋಪಿಗಳ ಪೈಕಿ 2ನೇ ಆರೋಪಿ ಅಗ್ರಿ ಗೋಲ್ಡ್ ಕಂಪೆನಿಯ ಚೇರ್ ಮ್ಯಾನ್ ವಿಜಯವಾಡದ ಅವ್ವಾ ವೆಂಕಟ್ ರಾಮರಾವ್ (58) , 3ನೇ ಆರೋಪಿ ಆಡಳಿತ ನಿರ್ದೇಶಕ ಅವ್ವಾ ವೆಂಕಟ ಶೇಷು ನಾರಾಯಣ ರಾವ್ (49), 7ನೇ ಆರೋಪಿ ನಿರ್ದೇಶಕ ಇಮ್ಮಡಿ ಸದಾಶಿವ ವರಪ್ರಸಾದ್ ರಾವ್ (67) 19ನೇ ಆರೋಪಿ ಆಡಳಿತ ನಿರ್ದೇಶಕ ಕಾಮಿರೆಡ್ಡಿ ರಾಮಚಂದ್ರ ರಾವ್ (55) ಇವರನ್ನು ನ್ಯಾಯಾಲಯ ಸಿಐಡಿ ವಶಕ್ಕೆ ಒಪ್ಪಿಸಿದೆ.
ಮಣಿಪಾಲದ ಸರಳೇಬೆಟ್ಟು ನಿವಾಸಿ ಕೃಷ್ಣ ನಾಯ್ಕ ಎಂಬವರು ಅಗ್ರಿಗೋಲ್ಡ್ ಕಂಪೆನಿಯಲ್ಲಿ ಹೂಡಿದ ಹಣ ಅವಧಿ ಮುಗಿದ ನಂತರವೂ ವಾಪಾಸ್ ನೀಡದೇ ವಂಚಿಸಿರುವುದಾಗಿ ಕಂಪೆನಿಯ ನಿರ್ದೇಶಕ ಪ್ರಕಾಶ್ ದೇವಾಡಿಗ ಹಾಗೂ ಕಂಪೆನಿಯ ವಿರುದ್ದ 2015ರ ಜ.10ರಂದು ಉಡುಪಿಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದು ಕರ್ನಾಟಕದಲ್ಲಿ ಅಗ್ರಿ ಗೋಲ್ಡ್ ಕಂಪೆನಿ ವಿರುದ್ದ ದಾಖಲಾದ ಪ್ರಥಮ ಪ್ರಕರಣವಾಗಿದೆ.
ಅಗ್ರಿಗೋಲ್ಡ್ ಬಹುಕೋಟಿ ಹಗರಣದ ಪ್ರಕರಣವನ್ನು ರಾಜ್ಯ ಸರ್ಕಾರ 2015ರ ಜು.24ರಂದು ಸಿಐಡಿ ತನಿಖೆಗೆ ವಹಿಸಿತ್ತು. ಡಿ.12ರಿಂದ ಪ್ರಕರಣದ ತನಿಖಾಧಿಕಾರಿಯಾಗಿರುವ ಸಿಐಡಿ ಡಿ ವೈ ಎಸ್ಪಿ ನಂಜುಡೇಗೌಡ ನೇತೃತ್ವದಲ್ಲಿ ತನಿಖೆ ಆರಂಬಿಸಲಾಗಿತ್ತು. ಆಂದ್ರ ಪ್ರದೆಶದಲ್ಲಿ ನೊಂದಣಿಯಾಗಿರುವ ಅಗ್ರಿಗೋಲ್ಡ್ ಸಂಸ್ಥೆಯು ವಿಜಯವಾಡದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಆರೋಪಿಗಳು ಕರ್ನಾತಕದಲ್ಲಿ 56 ಶಾಖೆಗಳನ್ನು ತೆರೆದು ಏಜೆಂಟರನ್ನು ನೇಮಕ ಮಾಡಿ ಹಣ ದ್ವಿಗುಣ, ಹೆಚ್ಚಿನ ಬಡ್ಡಿ, ಸೈಟು ಕೊಡಿಸುವುದಾಗಿ ಆಮೀಶ ಒಡ್ಡಿ ಕರ್ನಾಟಕ ರಾಜ್ಯದ 8,41,616 ಮಂದಿ ಹೂಡಿಕೆದಾರರಿಂದ 1639,63,45,230 ರೂ ಹಣ ಸಂಗ್ರಹಿಸಿ ಗ್ರಾಹಕರನ್ನು ವಂಚಿಸಿದ್ದರು. ಆರೋಪಿಗಳ ವಿರುದ್ದ ಆಂದ್ರದಲ್ಲಿ 5, ತೆಲಂಗಾನದಲ್ಲಿ ಎರಡು ಪ್ರಕರಣ ದಾಖಲಾಗಿದೆ.