ಕುಂದಾಪುರ: ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಹಿಂಸಾತ್ಮಕವಾಗಿ ಎಳೆದು ಕಾರಿನಲ್ಲಿ ತುಂಬಿಕೊಂಡು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.

ಸೆ. 29ರಂದು ಮಧ್ಯಾಹ್ನ 1.30ರ ಸುಮಾರಿಗೆ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬಂದ ಅಪರಿಚಿತರು ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಲವಂತವಾಗಿ ಎಳೆದು ಕಾರಿನಲ್ಲಿ ತುಂಬಿಕೊಂಡು ಹೋಗಿದ್ದರು. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಸ್ಥಳೀಯರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ ಕಾರು ಸಹಿತ ಪ್ರಮುಖ ಆರೋಪಿ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ತೋಟದಮನೆಯ ಮೊಹಮ್ಮದ್ ಸಿನಾನ್ (20) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಹೆಚ್.ಡಿ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕರಾದ ಶಿವಕುಮಾರ್ ಉಸ್ತುವಾರಿಯಲ್ಲಿ ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕ ವಿನಯ್ ಎಮ್. ಕೊರ್ಲಹಳ್ಳಿ ನೇತೃತ್ವ ತಂಡ ರಚಿಸಲಾಗಿತ್ತು. ಕೊಲ್ಲೂರು ಠಾಣಾ ಸಿಬ್ಬಂದಿಗಳಾದ ನಾಗೇಂದ್ರ, ರುದ್ರೇಶ, ನವೀನ್ ಕುಮಾರ್, ವಿಲಾಸ್ ರಾಠೋಡ, ನಾಗರಾಜ ಮೊದಲಾದವರಿದ್ದ ಪೊಲೀಸರ ತಂಡವು ಪ್ರಮುಖ ಆರೋಪಿಯನ್ನು ಪತ್ತೆ ಮಾಡಿದ್ದು ಸಹಿತ ಕೃತ್ಯಕ್ಕೆ ಬಳಸಿದ ವಾಹನ ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಇನ್ನಿಬ್ಬರು ಭಾಗಿಯಾಗಿದ್ದು ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲಾಗುವುದು. ಆರೋಪಿ ಮೊಹಮ್ಮದ್ ಸಿನಾನ್ ಕುಂದಾಪುರ ಉಪ ವಿಭಾಗದ ಇತರೆ ಠಾಣೆಗಳಲ್ಲಿ ದಾಖಲಾದ ಒಟ್ಟು ಐದು ದನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.