ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ಕೂರಿನಲ್ಲಿ 2023ರಲ್ಲಿ ನಡೆದಿದ್ದ ಕೊಲೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಬುಧವಾರ (ಜು.29) ತೀರ್ಪು ನೀಡಿದೆ.

ಪ್ರಕರಣದ ವಿವರ: ಮೇ 14, 2023ರಂದು ಕುಂದಾಪುರ ತಾಲೂಕಿನ ಹರ್ಕೂರು ಗ್ರಾಮದ ದೂರುದಾರರಾದ ನಾಗರಾಜ ಆಚಾರಿ ಅವರ ಗಾರೆ ಕೆಲಸಕ್ಕೆ ಸಂಗೋದಪ್ಪ (ಯಾನೇ ಸಂಗಮೇಶ), ಸಂಗನಗೌಡ, ರಾಜು, ಮಹಾಬಲೇಶ ಮತ್ತು ಎಲ್ಲಪ್ಪ ಅವರು ಬಂದಿದ್ದರು. ಅಂದು ರಾತ್ರಿ 9:15ರ ಸುಮಾರಿಗೆ ಸಂಗೋದಪ್ಪ ಹಾಗೂ ರಾಜು ಅವರ ನಡುವೆ ಸಂಬಳದ ವಿಚಾರವಾಗಿ ಗಲಾಟೆ ನಡೆದಿತ್ತು. ಈ ವೇಳೆ ಆಕ್ರೋಶಗೊಂಡ ರಾಜು, ಸಂಗೋದಪ್ಪ ಅವರಿಗೆ ಜೀವ ಬೆದರಿಕೆ ಹಾಕಿ, ಸ್ಥಳದಲ್ಲಿದ್ದ ಕೆಂಪು ಕಲ್ಲಿನಿಂದ ಸಂಗೋದಪ್ಪ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದನು. ಅಂದಿನ ಗಂಗೊಳ್ಳಿ ಠಾಣಾ ಪಿಎಸ್ಐ ವಿನಯ್ ಕೋರ್ಲಹಳ್ಳಿ ಅವರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಸಂತೋಷ್ ಕಾಯ್ಕಿಣಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಂ ಹುಸೇನ್ ಶೇಖ್ ಅವರು ಅಂತಿಮ ತೀರ್ಪು ಪ್ರಕಟಿಸಿದ್ದಾರೆ.
ಶಿಕ್ಷೆಯ ವಿವರ: ಕಲಂ 302 ಐಪಿಸಿ: ಜೀವಾವಧಿ ಶಿಕ್ಷೆ ಮತ್ತು 5,000 ದಂಡ, ಕಲಂ 504 ಐಪಿಸಿ: 1 ವರ್ಷ ಶಿಕ್ಷೆ ಮತ್ತು ₹5,000 ದಂಡ, ಕಲಂ 506 ಐಪಿಸಿ: 1 ವರ್ಷ ಶಿಕ್ಷೆ ಮತ್ತು ₹5,000 ದಂಡ. ಕಲಂ 324 ಐಪಿಸಿ: 1 ವರ್ಷ ಶಿಕ್ಷೆ ಮತ್ತು ₹5,000 ದಂಡ.
ಸರಕಾರದ ಪರವಾಗಿ ಅಭಿಯೋಜಕಿ ಇಂದಿರಾ ನಾಯಕ್ ಅವರು ವಾದ ಮಂಡಿಸಿದ್ದರು. ಕೋರ್ಟ್ ಮಾನಿಟರಿಂಗ್ ಅಧಿಕಾರಿಯಾಗಿದ್ದ ಸಿಪಿಐ ಸವ್ಯತೇಜ, ಪ್ರಸ್ತುತ ಬೈಂದೂರು ವೃತ್ತ ನಿರೀಕ್ಷಕರಾದ ಶಿವಕುಮಾರ್ ಬಿ., ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪವನ್ ನಾಯಕ್ ಹಾಗೂ ನ್ಯಾಯಾಲಯದ ಸಿಬ್ಬಂದಿ ರೇಖಾ ಸಾಕ್ಷಿಗಳನ್ನು ಸರಿಯಾದ ಸಮಯಕ್ಕೆ ಹಾಜರುಪಡಿಸಿ ಆರೋಪಿಗೆ ಶಿಕ್ಷೆಯಾಗುವಂತೆ ಪ್ರಮುಖ ಪಾತ್ರ ವಹಿಸಿದ್ದರು.
Comments are closed.