ಕರಾವಳಿ

ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಜು.29ರಿಂದ ಸೆ.14ರ ತನಕ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆ

Pinterest LinkedIn Tumblr

ಕುಂದಾಪುರ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆ ಬೈಂದೂರು ಚಾತುರ್ಮಾಸ ಯು ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಬೈಂದೂರು ನೇತೃತ್ವದಲ್ಲಿ ಜು. 29ಬುಧವಾರ ಗುರುಪೂರ್ಣಿಮೆಯಿಂದ ಸೆ. 14 ಸೋಮವಾರದ ತನಕ ಬೈಂದೂರು ಸಮೀಪದ ಗೋಳಿಹೊಳೆಯ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಬೈಂದೂರು ಶಾಸಕ, ಬೈಂದೂರು ಚಾತುರ್ಮಾಸ ಸಮಿತಿ ಅಧ್ಯಕ್ಷ ಗುರುರಾಜ್ ಗಂಟಿಹೊಳೆ ಹೇಳಿದರು.

ಅವರು ಕುಂದಾಪುರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಶ್ರೀರಾಮ ಕ್ಷೇತ್ರದ ಶ್ರೀಗಳು ಉಡುಪಿ ಜಿಲ್ಲೆಯಲ್ಲಿ ನಡೆಸುವ ಪ್ರಥಮ ಚಾತುರ್ಮಾಸ್ಯ ಇದಾಗಿದೆ. ಸನಾತನ ಪರಂಪರೆಯಲ್ಲಿ ಚಾತುರ್ಮಾಸ್ಯ ಎನ್ನುವುದು ವಿಶಿಷ್ಠ ಧಾರ್ಮಿಕ ಕಲ್ಪನೆಯಾಗಿದೆ. ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುವ ಕಾರ್ಯಕ್ರಮ ಇದಾಗಿದೆ. ಇಡೀ ಬೈಂದೂರು ಕ್ಷೇತ್ರದ ಜನ ಒಂದಾಗಿ, ಜಾತಿಮತ ಬೇಧವಿಲ್ಲದೆ 48 ದಿನಗಳ ಕಾಲ ನಡೆಯುವ ಶ್ರೀಗಳ ಆತ್ಮೋನ್ನತಿ ಹಾಗೂ ಲೋಕಕಲ್ಯಾಣಾರ್ಥವಾಗಿ ಈ ಬೈಂದೂರು ಚಾತುರ್ಮಾಸ್ಯವನ್ನು ಯಶಸ್ವಿಗೊಳಿಸಲು ಸಂಕಲ್ಪ ಮಾಡಿದ್ದಾರೆ ಎಂದರು.

 

ಬೈಂದೂರು ಚಾತುರ್ಮಾಸ್ಯ ಸಮಿತಿಯ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಬೈಂದೂರು ಸಮೀಪದ ಗೋಳಿಹೊಳೆಯಲ್ಲಿ ಶ್ರೀಗಳು 48 ದಿನಗಳ ಕಾಲ ಚಾತುರ್ಮಾಸ್ಯ ವ್ರತವನ್ನು ಆಚರಿಸುತ್ತಿರುವ ಹೆಮ್ಮೆಯ ವಿಚಾರವಾಗಿದೆ. ಶ್ರೀರಾಮ ಕ್ಷೇತ್ರದ ಶ್ರೀಗಳು ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ಪ್ರಥಮವಾಗಿ ಚಾತುರ್ಮಾಸ್ಯ ಆಚರಿಸಿಕೊಳ್ಳುತ್ತಿದ್ದಾರೆ. ಜಾತಿಮತ ಪಕ್ಷ ಬೇದವಿಲ್ಲದೆ ಭಕ್ತಿಯೊಂದೇ ಮುಖ್ಯ ಎನ್ನುವ ನೆಲೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಇಲ್ಲಿ ಭಕ್ತಿಯೇ ಪ್ರಧಾನ ಎಂದರು.

 

ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಶ್ರೀಗಳ ಚಾತುರ್ಮಾಸ್ಯ ಧಾರ್ಮಿಕ ಕಾರ್ಯಕ್ರಮವು ಒಂದು ಸಮುದಾಯಕ್ಕೆ ಸೇರದೆ ಎಲ್ಲರೂ ಕೂಡಾ ಒಂದಾಗಿ ಆಚರಿಸಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದಂತೆ ಎಲ್ಲಾ ಹಿಂದುಳಿದ ವರ್ಗಗಳು ಸೇರಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಮಿತಿ ರಚನೆ ಮಾಡಲಾಗಿದೆ ಎಂದರು.

 

ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಉದಯ ಜಿ.ಪೂಜಾರಿ ಉಪಸ್ಥಿತರಿದ್ದರು.

ಬೈಂದೂರು ಚಾತುರ್ಮಾಸ್ಯ ಯಶಸ್ಸಿಗೆ ಈಗಾಗಲೆ 48 ಸಮಿತಿಗಳನ್ನು ಮಾಡಿ, 48 ದಿನಗಳ ಜವಾಬ್ದಾರಿಯನ್ನು ಒಂದೊಂದು ಗ್ರಾಮಕ್ಕೆ ವಹಿಸಲಾಗಿದೆ. 48 ದಿನಗಳನ್ನು  ವಿಶೇಷವಾದ ಧಾರ್ಮಿಕ ವೈಶಿಷ್ಟ್ಯತೆಗಳೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ. ಕೇವಲ ಉಡುಪಿ ಜಿಲ್ಲೆಯವರು ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಮುಂಬಯಿಗಳಿಂದಲೂ ಭಕ್ತಾದಿಗಳು ಆಗಮಿಸಲಿದ್ದಾರೆ. ಹೊರೆಕಾಣಿಕೆ ಬರಲಿದೆ. ಈಗಾಗಲೇ ಸಭೆಗಳನ್ನು ನಡೆಸಲಾಗಿದೆ.

ಜು.29ರಂದು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ತನಕ ಚಾತುರ್ಮಾಸ್ಯ ವ್ರತ ಸಂಕಲ್ಪ ಪ್ರಯುಕ್ತ ರಾಮತಾರಕ ಯಜ್ಞ ಹಾಗೂ ವೈದಿಕ ವಿಧಿ ವಿಧಾನಗಳು ಆರಂಭಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಬೈಂದೂರು ಶ್ರೀಸೇನೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಶ್ರೀಗಳ ಪುರಪ್ರವೇಶದ ಭವ್ಯ ಮೆರವಣಿಗೆ ಪ್ರಾರಂಭವಾಗಲಿದೆ. ಬೆಳಿಗ್ಗೆ 11 ಗಂಟೆಗೆ ಶ್ರೀ ಬಿಳಿಶಿಲೆ ವಿನಾಯಕ ದೇವರಿಗೆ ಶ್ರೀಗಳಿಂದ ವಿಶೇಷ ಪೂಜೆ ನಡೆಯಲಿದೆ. 11.05ಕ್ಕೆ ಶ್ರೀಗಳ ವ್ಯಾಸ ಪೀಠದ ಪೀಠಾರೋಹಣ ಕಾರ್ಯಕ್ರಮ, ಗುರು ಪಾದುಕಾ ಪೂಜೆ, ಶ್ರೀಗಳ ಆಶೀರ್ವಚನ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.

ಚಾತುರ್ಮಾಸ್ಯದ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ 11 ರವರೆಗೆ ಭಜನೆ, ಬಳಿಕ ಗುರುಪಾದುಕಾ ಪೂಜೆ, ಆಶೀರ್ವಚನ, ಮಂತ್ರಾಕ್ಷತೆ, ಅನುಗ್ರಹ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಪ್ರತಿದಿನ 5.30 ರಿಂದ ರಾತ್ರಿ 9.30ರ ತನಕ ಭಕ್ತಿಪ್ರಧಾನ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸೆ.14ರಂದು ಚಾತುರ್ಮಾಸ್ಯ ವ್ರತ ಮುಕ್ತಾಯಗೊಳ್ಳಲಿದ್ದು ಅದೇ ದಿನ ಬೆಳಿಗ್ಗೆ ಶ್ರೀಗಳವರ ಸೀಮೋಲ್ಲಂಘನ ಕಾರ್ಯಕ್ರಮ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ತಟದಲ್ಲಿರುವ ಸುಮನಾವತಿ ನದಿಯಲ್ಲಿ ಗಂಗಾ ಪೂಜೆ ಸಲ್ಲಿಸುವುದರೊಂದಿಗೆ ಸಮಾಪನಗೊಳ್ಳಲಿದೆ. ಧರ್ಮಸಭೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಿಜೇಶ್ ಚೌಟ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಾಜಿ ಸಚಿವರಾದ ಮಂಕಾಳ ಎಸ್.ವೈದ್ಯ, ಮಧು ಬಂಗಾರಪ್ಪ, ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಎ.ಕಿರಣ್ ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಉಮಾನಾಥ ಕೋಟ್ಯಾನ್, ರಾಜೇಶ ನಾಯ್ಕ್, ಡಾ.ವೈ.ಭರತ್ ಕುಮಾರ್ ಶೆಟ್ಟಿ,ವೇದವ್ಯಾಸ ಕಾಮತ್, ಹರೀಶ ಪೂಂಜಾ, ಭಾಗಿರಥಿ ಮುರುಳ್ಯ,  ಅಶೋಕ್ ರೈ, ಬೇಳೂರು ಗೋಪಾಲಕೃಷ್ಣ  ಮೊದಲಾದವರು ಭಾಗವಹಿಸಲಿದ್ದಾರೆ.

Comments are closed.