ಕರಾವಳಿ

ದೇವಸ್ಥಾನದ ಸುರಕ್ಷತೆ ಆದ್ಯತೆಯಾಗಿರಲಿ: ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ | ಕೊಲ್ಲೂರು ದೇವಳದ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳ ಸಭೆ

Pinterest LinkedIn Tumblr

ಕುಂದಾಪುರ: ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಗೊಳಪಟ್ಟ ‘ಎ’ ದರ್ಜೆ ಶ್ರೇಣಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ವತಿಯಿಂದ ದೇವಳದ ಅಧಿಕಾರಿಗಳ ಉಪಸ್ಥಿತಿಯಲ್ಲಿ ದೇವಸ್ಥಾನ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗಳ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಯಿತು.

ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮಾತನಾಡಿ, ದೇವಸ್ಥಾನದ ಭದ್ರತೆ, ಹುಂಡಿ ಸುರಕ್ಷತೆ, ಆಗಮಿಸುವ ಗಣ್ಯರ ಭದ್ರತೆ, ಜನಸಂದಣಿ ನಿಯಂತ್ರಣ, ಪಾರ್ಕಿಂಗ್ ವಿಚಾರದಲ್ಲಿ ದೇವಳದವರು ಹಾಗೂ ಪೊಲೀಸ್ ಇಲಾಖೆಯ ಸಮನ್ವಯತೆ ಅಗತ್ಯವಿದೆ. ದೇವಸ್ಥಾನದ ಆಸುಪಾಸಿನಲ್ಲಿ ನಡೆದ ಕೆಲ ಅಪರಾಧ ಚಟುವಟಿಕೆ ಪತ್ತೆಗೆ ಸಿಸಿ ಟಿವಿ ದೃಶ್ಯಗಳು ಇಲಾಖೆಗೆ ಸಹಕಾರಿಯಾಗಿತ್ತು ಎಂದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮುಖ್ಯಕಾರ್ಯನಿರ್ವಹಣಾಧಿಕಾರಿ  ಪ್ರಶಾಂತ್ ಶೆಟ್ಟಿ ಮಾತನಾಡಿ, ದೇವಸ್ಥಾನದಲ್ಲಿ ಈಗಾಗಲೇ ಕಣ್ಗಾವಲಿಗೆ 150 ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಹುಂಡಿ ಎಣಿಕೆ ಮಾಡುವ ಸಭಾಂಗಣಕ್ಕೂ 4 ಸಿಸಿ ಕೆಮರಾಗಳಿದ್ದು, ಎಣಿಕೆ ಮಾಡುವ ಸಂದರ್ಭದಲ್ಲಿ ಪ್ರತ್ಯೇಕವಾಗಿ ವಿಡಿಯೋ ಗ್ರಾಫರ್ ಗಳನ್ನು ಕರೆಸಿ, ಅದನ್ನು ರೆಕಾರ್ಡ್ ಕೂಡ ಮಾಡಲಾಗುತ್ತಿದೆ. ಇನ್ನು ಇಲ್ಲಿ ಪ್ರತೀ ತಿಂಗಳು ಹುಂಡಿ ಹಣವನ್ನು ಎಣಿಕೆ ಮಾಡಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಲು ನೆಟ್ವರ್ಕ್ ಎಂಜಿನಿಯರ್ ನಿರಂತರ ನಿಗಾ ವಹಿಸುತ್ತಾರೆ. ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕೊಲ್ಲೂರು ಠಾಣೆ ಉಪನಿರೀಕ್ಷಕರಾದ ವಿನಯ್ ಎಂ. ಕೊರ್ಲಹಳ್ಳಿ, ಭೀಮಾಶಂಕರ್ ಸಿನ್ನೂರ ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿ ನೀಡಿದರು. ಸಂತೋಷ್ ಕೊಠಾರಿ ಕಾರ್ಯಕ್ರ‌ಮ ನಿರೂಪಿಸಿದರು.

ಸರಕಾರದ ಆದೇಶ: ದೇವಾಲಯದ ಹುಂಡಿ (ದೇಣಿಗೆ ಪೆಟ್ಟಿಗೆಗಳು) ಮತ್ತು ಹುಂಡಿ ನಗದು ಮತ್ತು ಇತರೆ ಚಿನ್ನ,ಬೆಳ್ಳಿ ವಸ್ತುಗಳು ಇತ್ಯಾದಿಗಳ ಭದ್ರತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಮಾರ್ಗಸೂಚಿ ಸಿದ್ಧಪಡಿಸಿ ಸಕ್ಷಮ ಇಲಾಖೆಗಳಿಗೆ ರವಾನಿಸಿದೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಕಂದಾಯ ಇಲಾಖೆ) ರಾಜೇಂದರ್ ಕುಮಾರ್ ಕಟಾರಿಯಾ ಅವರು ಈ ವಿಸ್ತೃತ ಸುತ್ತೋಲೆಯನ್ನು ಕಳೆದ ವಾರ ಹೊರಡಿಸಿದ್ದು, ಜಿಲ್ಲಾಧಿಕಾರಿಗಳು, ಎಸಿ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ 19 ನಿಯಮಗಳ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದರು.

ಈ ಹಿನ್ನೆಲೆ ದಕ್ಷಿಣ ಭಾರತ ಪ್ರಮುಖ ಶ್ರದ್ದಾಕೇಂದ್ರವಾಗಿರುವ ಕೊಲ್ಲೂರಿನಲ್ಲಿ ಪೊಲೀಸ್ ಇಲಾಖೆಯಿಂದ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಗಿದೆ.

ಭಕ್ತರ ಸಂಖ್ಯೆಯಲ್ಲಿ ಏರಿಕೆ: ಪ್ರತಿವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಗಾಲದ ಅವಧಿಯಲ್ಲಿ ಕೂಡ ಕೊಲ್ಲೂರು ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಅಪಾರವಾಗಿದೆ. ಇತ್ತೀಚಿನ ದಿನಗಳಲ್ಲಿ ತಮಿಳುನಾಡು ಸಿಎಂ ವಿಜಯ್, ಕೇರಳ ಸಿಎಂ ಸತೀಶನ್, ಕರ್ನಾಟಕ ರಾಜ್ಯದ ಡಿಸಿಎಂ ಡಾ. ಜಿ. ಪರಮೇಶ್ವರ್ ಸಹಿತ ವಿವಿಧ ಗಣ್ಯರ ಭೇಟಿಯೂ ನಡೆದಿತ್ತು.

Comments are closed.