(ವಿಶೇಷ ವರದಿ: ಯೋಗೀಶ್ ಕುಂಭಾಸಿ)
ಕುಂದಾಪುರ: ಈ ಮನೆಯೊಳಗೆ ಕಾಲಿಕಟ್ಟರೆ ಮಕ್ಕಳ ಆಟೋಟ, ಗೋಡೆಗಳ ಚಿತ್ರಗಳು ಕಣ್ಣಿಗೆ ಮುದ ನೀಡುತ್ತದೆ, ವಿದ್ಯಾರ್ಥಿಗಳ ಸಹಬಾಳ್ವೆ ಎಲ್ಲರನ್ನೂ ತಲೆದೂಗಿಸುವಂತೆ ಮಾಡುತ್ತದೆ. ಹೀಗೆ ಸಾಮೂಹಿಕವಾಗಿ ಆಟ, ಪಾಠ-ಪ್ರವಚನದಲ್ಲಿ ತೊಡಗಿಸಿಕೊಳ್ಳಲು ಕಾರಣವಾಗಿದ್ದು ಕುಂದಾಪುರ ತಾಲೂಕಿನ ಕುಂಭಾಶಿಯಲ್ಲಿರುವ ‘ಮಕ್ಕಳ ಮನೆ’.

ಏನಿದು ಮಕ್ಕಳ ಮನೆ: ಸುಮಾರು 13 ವರ್ಷಗಳ ಹಿಂದೆ 2013-14ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಕಾಲನಿಯ ಕೊರಗ ಮಕ್ಕಳ ಕಲಿಕೆಗಾಗಿ ಹಾಗೂ ಕೊರಗರ ಸರ್ವತೋಮುಖ ಅಭಿವೃದ್ಧಿಗಾಗಿ ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ್ ಕೊರಗ ಅವರ ಪರಿಕಲ್ಪನೆಯಲ್ಲಿ, ಕೊರಗ ಸಮುದಾಯದ ಮುಖಂಡರಾದ ಗಣೇಶ್ ಬಾರ್ಕೂರು, ಶೇಖರ ಮರವಂತೆ, ಲಕ್ಷ್ಮಣ ಬೈಂದೂರು ಮೊದಲಾದವರ ಹೋರಾಟದ ಫಲವಾಗಿ ಸರಕಾರದ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ (ಐಟಿಡಿಪಿ) ಹಾಗೂ ಸ್ಥಳೀಯ ಪಂಚಾಯತ್ ಸೇರಿದಂತೆ ದಾನಿಗಳ ಸಹಕಾರದಲ್ಲಿ ಮಕ್ಕಳ ಮನೆಯನ್ನು ಕುಂಭಾಸಿ ಕೊರಗ ಕಾಲನಿ ಹಾಗೂ ಗ್ರಾಮಪಂಚಾಯತ್ ಸಮೀಪದಲ್ಲಿರುವ ಕೊರಗ ಭವನದಲ್ಲಿ ಪ್ರಾರಂಭಿಸಲಾಯಿತು. ಆರಂಭದಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಹೋಗುವ 18 ಮಕ್ಕಳಿಂದ ಆರಂಭವಾದ ಈ ವಿಶಿಷ್ಟ ಕಲ್ಪನೆಯ ಮಕ್ಕಳ ಮನೆ ಈವರೆಗೆ ಹಲವಾರು ಮಕ್ಕಳ ಭವ್ಯ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ.
ಯಾಕೇ ಈ ಪ್ರಯತ್ನ: ಹಲವು ವರ್ಷಗಳ ಹಿಂದೆ ಮೇಲ್ವರ್ಗದ ಜನರಿಂದ ದೌರ್ಜನ್ಯಕ್ಕೊಳಗಾಗುತ್ತಾ, ಸಮಾಜದಿಂದಲೇ ದೂರವಿದ್ದ ಕೊರಗ ಕುಟುಂಬದವರ ಪಾಡು ಹೇಳತೀರದು. ಕುಂಭಾಶಿ ಪ್ರದೇಶದಲ್ಲಿಯೂ ಇದೇ ಅವ್ಯವಸ್ಥೆಯಿಂದ ಕೊರಗ ಕುಟುಂಬಗಳು ಬದುಕುವಂತಾಗಿತ್ತು. ಸಮಾಜದಿಂದ, ಶಿಕ್ಷಣದಿಂದ ತಾವೂ ದೂರವಿದ್ದ ಇವರು ತಮ್ಮ ಮಕ್ಕಳನ್ನು ಶಾಲೆಯತ್ತ ಮುಖ ಮಾಡಿಸಿಯೂ ಇರಲಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಇವರಿಗೆ ಕೊಂಚವೂ ಆಲೋಚನೆ ಇರಲಿಲ್ಲ. ಇದನ್ನೆಲ್ಲಾ ಅರಿತ ಸ್ಥಳೀಯ ಕೊರಗ ಮುಖಂಡರ ಇಚ್ಚಾಶಕ್ತಿಯಲ್ಲಿ ಸುಸಜ್ಜಿತ ಕಟ್ಟಡ, ಅಡುಗೆ ಕೋಣೆ ಸಹಿತ ಒಂದು ಹಾಲ್ ಪಡೆದು ‘ಮಕ್ಕಳ ಮನೆ’ ಹೆಸರಿನಲ್ಲಿ ಕೊರಗ ಸಮುದಾಯದ ಮಕ್ಕಳನ್ನು ಒಗ್ಗೂಡಿಸಲಾಯಿತು. ‘ಮಕ್ಕಳ ಮನೆ’ಯಲ್ಲಿದ್ದು ಬೇರೆಬೇರೆ ಶಾಲಾ-ಕಾಲೇಜಿನಲ್ಲಿ ಕಲಿತ ಮಕ್ಕಳು ಪಿಯುಸಿ, ಬಿ.ಎ., ಎಂ.ಎಸ್.ಡಬ್ಲ್ಯೂಮುಗಿಸಿ ಬೆಂಗಳೂರಿನಲ್ಲಿ ಹಾಗೂ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವವರಿದ್ದಾರೆ.
ಸಕಲ ವ್ಯವಸ್ಥೆ: ಡಿ.ಎಡ್ ಪದವಿ ಪಡೆದ ಕೊರಗ ಅಮುದಾಯದ ವಿನೀತಾ ಪಡುಕೋಣೆ ಎನ್ನುವ ಶಿಕ್ಷಕಿಯನ್ನು ಇಲ್ಲಿನ ಮಕ್ಕಳ ಮನೆಪಾಠಕ್ಕಾಗಿ ನೇಮಿಸಲಾಗಿದೆ. ಅವರು ಇಲ್ಲಿನ ಮಕ್ಕಳಿಗೆ ಮನೆ ಪಾಠ ಹೇಳುವ ಜೊತೆಗೆ ಚಿತ್ರಕಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಲಿಸುತ್ತಾರೆ. ಇಲ್ಲಿನ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್, ಮೊಟ್ಟೆ, ಮೀನು ಸಾರು ನೀಡುವ ಮೂಲಕ ಆರೋಗ್ಯಕರ ಊಟ ನೀಡಲಾಗುತ್ತೆ. ಐಟಿಡಿಪಿ ವತಿಯಿಂದ ಆಹಾರಕ್ಕೆ ಸಂಬಂಧಿಸಿದ ವ್ಯವಸ್ಥೆ ಕಲ್ಪಿಸಿದೆ. ಕುಂಭಾಸಿ ಗ್ರಾ.ಪಂ. ಈ ಕಟ್ಟಡದ ವಿದ್ಯುತ್ ಬಿಲ್ ಪಾವತಿಸುತ್ತದೆ. ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ನಡೆಯುತ್ತದೆ. ಎಸ್.ಎಸ್.ಎಲ್‌ಸಿ ಮಕ್ಕಳಿಗೆ ಕೋಚಿಂಗ್ ನೀಡಲಾಗುತ್ತದೆ. ಶಿಕ್ಷಣದ ಜೊತೆಗೆ ಸಾಂಸ್ಕ್ರತಿಕ ಚಟುವಟಿಕೆಗಳನ್ನು ಕಲಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ. ರಕ್ತದಾನ ಶಿಬಿರ, ಕ್ರೀಡಾಕೂಟ, ಬುಟ್ಟಿ ಹೆಣೆಯುವುದು, ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸಮುದಾಯದ ಕಲೆಯಾದ ಡೋಲು ವಾದನವನ್ನು ಆಸಕ್ತ ಮಕ್ಕಳಿಗೆ ಕಲಿಸಲಾಗುತ್ತದೆ.
ಕುಂಭಾಸಿ ಕೊರಗ ಕಾಲನಿ ಮಕ್ಕಳು ಮಾತ್ರವಲ್ಲದೆ ಕಲಿಕಾ ಆಸಕ್ತಿ ಹೊಂದಿದ್ದು ಆರ್ಥಿಕ ಸಂಕಷ್ಟದಲ್ಲಿರುವ ಪಡುಕೋಣೆ, ಕೋಣ್ಕಿ ಪರಿಸರದ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಪ್ರಸ್ತುತ 2026-27 ನೇ ಸಾಲಿನಲ್ಲಿ 12 ಮಕ್ಕಳು ಪ್ರಾಥಮಿಕ, ಪ್ರೌಢ ಶಿಕ್ಷಣ, ಪದವಿಪೂರ್ವ ಮತ್ತು ನರ್ಸಿಂಗ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಬಾರಿ 8 ಮಂದಿ ವಿದ್ಯಾರ್ಥಿಗಳು, ನಾಲ್ವರು ವಿದ್ಯಾರ್ಥಿನಿಯರಿದ್ದು 12 ಮಂದಿಯಲ್ಲಿ ಅಂಗನವಾಡಿಗೆ ತೆರಳುವ ಇಬ್ಬರು ಪುಟಾಣಿಗಳು, 5ನೇ ತರಗತಿಯ ಇಬ್ಬರು, 9ನೇ ತರಗತಿಯ ಇಬ್ಬರು, ಎಸ್.ಎಸ್.ಎಲ್.ಸಿ. ಓದುವ ಮೂವರು, ಪ್ರಥಮ ಪಿಯುಸಿ, ನರ್ಸಿಂಗ್, ಫೈಯರ್ ಅಂಡ್ ಸೇಫ್ಟಿ ವಿಭಾಗದಲ್ಲಿ ತಲಾ ಒಬ್ಬೊಬ್ಬರು ಇಲ್ಲಿ ನೆಲೆಸಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.
ಆಟೋಟ, ಪಾಠ, ವಸತಿ: ಮಕ್ಕಳ ಮನೆಯಲ್ಲಿನ ವಿದ್ಯಾರ್ಥಿಗಳು ಬೆಳಿಗ್ಗೆ ನಿತ್ಯಕರ್ಮಗಳನ್ನು ಮುಗಿಸಿ ಉಪಹಾರ ಸೇವಿಸಿ ಮನೆಪಾಠ ಕಲಿತು ಶಾಲೆಗಳಿಗೆ ತೆರಳುತ್ತಾರೆ. ಸಂಜೆ ಇವರು ಶಾಲೆಯಿಂದ ಬರುತ್ತಲೇ ಉಪಹಾರ ತಿಂದು ಪುನಃ ಆಟ ಹಾಗೂ ಮನೆ ಪಾಠ- ಹೋಂ ವರ್ಕ್‌ನಲ್ಲಿ ತಲ್ಲೀನರಾಗುತ್ತಾರೆ. ರಾತ್ರಿ ಊಟ ಮುಗಿಸಿ ಮಕ್ಕಳ ಮನೆಯಲ್ಲಿ ತಂಗುತ್ತಾರೆ. ನಿತ್ಯ ಈ ಪರಿಪಾಠ ಬೆಳೆದು ಬಂದಿದ್ದು ಹೊರ ಭಾಗದ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ರಜಾ ಸಮಯ ಭೇಟಿ ನೀಡಿ ವಾಪಾಸ್ಸಾಗುತ್ತಾರೆ. ದೀಪಾವಳಿ ಮೊದಲಾದ ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ.
ಮಕ್ಕಳಿಗೆ ಶಿಕ್ಷಣವನ್ನು ನೀಡುವ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಮಕ್ಕಳ ಭವಿಷ್ಯ ರೂಪುಗೊಳ್ಳಲು ಶಿಕ್ಷಣ ಬೇಕು, ಸಮಾಜದಲ್ಲಿ ಈ ಮಕ್ಕಳು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಲು ಅವರನ್ನು ‘ಮಕ್ಕಳ ಮನೆ’ ಪರಿಕಲ್ಪನೆಯಡಿ ಒಂದುಗೂಡಿಸಲಾಗಿದೆ. ಸರಕಾರ ಮತ್ತು ಇಲಾಖೆ ಇನ್ನಷ್ಟು ಸಹಕಾರ ನೀಡಬೇಕು. ಕಳೆದ 4 ತಿಂಗಳಿನಿಂದ ಶಿಕ್ಷಕಿ ಹಾಗೂ ಅಡುಗೆಯವರಿಗೆ ಗೌರವಧನ ನೀಡಿಲ್ಲ. ಆಹಾರ ಸಾಮಾಗ್ರಿ ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಸಂಬಂದಪಟ್ಟವರು ಶೀಘ್ರ ಕ್ರಮವಹಿಸಬೇಕು. – ಗಣೇಶ ವಿ. ಕುಂದಾಪುರ (ಕೊರಗ ಶ್ರೇಯೋಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ)

Comments are closed.