ಕುಂದಾಪುರ: ತಾಲೂಕಿನ ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಸಿದ್ದಾಪುರ- ಶಿವಮೊಗ್ಗ ಜಿಲ್ಲಾ ರಸ್ತೆ ಪಕ್ಕದಲ್ಲಿ ಚಿರತೆಯೊಂದನ್ನು ಕೊಂದು ಎಸೆದ ಬಗ್ಗೆ ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಅರಣ್ಯ ಇಲಾಖೆಯ ಶಂಕರನಾರಾಯಣ ವಲಯದಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣಕ್ಕೆ ಸಂಬಂದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ತಲೆಮರೆಸಿಕೊಂಡ ಇನ್ನಿಬ್ಬರ ಪತ್ತೆಗೆ ಅಧಿಕಾರಿಗಳು ಬಲೆಬೀಸಿದ್ದಾರೆ.

ಕುಂದಾಪುರ ತಾಲೂಕಿನ ಕಂಡ್ಲೂರು ಮೂಲದ ಮಹಮ್ಮದ್ ನದೀಮ್ ಕರಾಣಿ, ಯಡಮೊಗೆಯವರಾದ ಮಂಜುನಾಥ ಶೆಟ್ಟಿ, ನಾಗರಾಜ ಭೋವಿ, ವೆಂಕಟರಮಣ ಭೋವಿ ಬಂಧಿತರು. ಇವರಿಂದ ಚಿರತೆಯ ಕಳವಾದ ಭಾಗಗಳು, ಬಂದೂಕು, 5 ಜೀವಂತ ಗುಂಡುಗಳು, 2 ಬೈಕುಗಳು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಹಾಗೂ 1963ರ ಕರ್ನಾಟಕ ಅರಣ್ಯ ಕಾಯ್ದೆಯಂತೆ ವನ್ಯಜೀವಿಗಳ ಹತ್ಯೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕುಂದಾಪುರದ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೆನ್ ಪಿ. ಅವರ ಮಾರ್ಗದರ್ಶನದಲ್ಲಿ ಶಂಕರನಾರಾಯಣ ವಲಯದ ವಲಯ ಅರಣ್ಯ ಅಧಿಕಾರಿ ಸಂದೇಶ್ ಕುಮಾರ್ ಹಾಗೂ ಸಿಬ್ಬಂದಿಗಳು, ಕುಂದಾಪುರ ವಲಯದ ಸಿಬ್ಬಂದಿಗಳು, ಬೈಂದೂರು ವಲಯದ ಸಿಬ್ಬಂದಿಗಳು ಮತ್ತು ಕಂಡ್ಲೂರು ಗ್ರಾಮಾಂತರ ಪೋಲೀಸ್ ಠಾಣೆಯ ಠಾಣಾಧಿಕಾರಿ ನಿರಂಜನ್ ಗೌಡ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕುಂದಾಪುರ ವಿಭಾಗದ ಹೆಚ್ಚುವರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕ ಪಿ. ಶ್ರೀಧರ್ ಸಮಕ್ಷಮದಲ್ಲಿ ನಡೆದಿದೆ ಎಂದು ಅರಣ್ಯ ಇಲಾಖೆಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Comments are closed.