ಉಡುಪಿ: ಕುರ್ಕಾಲು ಗ್ರಾಮದ ಶಂಕರಪುರ ಎಂಬಲ್ಲಿ ಫೆ.21ರಂದು ಬೆಳಗ್ಗೆ ನಡೆದ ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ ಮೂರ್ನಾಲ್ಕು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರಕನ್ನಡ ಮೂಲದ ಆನಂದ ಅಲಿಯಾಸ್ ಹಸನ್ ಸಾಬ್ ಅಮೀನಗಡ (49),ಕಿರಣ್ ಧರ್ಮರಾಜ್ ಗೋಡಿಮನಿ (19), ಶಶಿಧರ (19) ಬಂಧಿತ ಆರೋಪಿಗಳು.
ಕುರ್ಕಾಲು ಗ್ರಾಮದ ಶಂಕರಪುರದ ಹೆಲೆನ್ ಡಿಸೋಜ(69) ಎಂಬವರು ತನ್ನ ಮನೆಯ ಹಿಂಬದಿಯಲ್ಲಿ ಗೀತಾ ಅವರೊಂದಿಗೆ ಮಲ್ಲಿಗೆ ಕಟ್ಟುತ್ತಿದ್ದ ವೇಳೆ, ಈ ಹಿಂದೆ ಬಾಡಿಗೆಗೆ ಇದ್ದ ಆನಂದ ಹಾಗೂ ಇನ್ನಿಬ್ಬರು ಬಾಡಿಗೆ ರೂಮ್ ವಿಚಾರಿಸಲು ಬಂದಿದ್ದರು. ಬಾಡಿಗೆ ರೂಮ್ ಇಲ್ಲದಕ್ಕೆ ಇವರು ಅಲ್ಲೇ ಸಮೀಪದ ಬೇರೆ ಮನೆ ಕಡೆಗೆ ಹೋದರು.ನಂತರ ಅವರಲ್ಲಿ ಒಬ್ಬ ವಾಪಾಸ್ಸು ಹೆಲೆನ್ ಡಿಸೋಜ ಅವರ ಬಳಿಗೆ ಬಂದು, ಮೊಬೈಲ್ ನಂಬರ್ ಕೇಳಿದನು.
ಹೆಲೆನ್ ಡಿಸೋಜ ಮೊಬೈಲ್ ನಂಬರ್ ಹೇಳುತ್ತಿರುವಾಗ ಆತ ಹೆಲೆನ್ ಅವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 3,50,000ರೂ. ಮೌಲ್ಯದ 28 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಹೋದನು. ಆಗ ಆತನನ್ನು ತಡೆಯಲು ಬಂದ ಹೆಲೆನ್ ಅವರ ಅಕ್ಕ ತೆರಜ ಎಂಬವರನ್ನು ದೂಡಿ ಹಾಕಿ ಮೂವರು ಬೈಕ್ನಲ್ಲಿ ಪರಾರಿಯಾದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೂಡಲೇ ಕಾರ್ಯಾಚರಣೆಗಿಳಿದ ಶಿರ್ವ ಠಾಣಾಧಿಕಾರಿ ಹಾಗೂ ಸಿಬ್ಬಂದಿ, ಘಟನಾ ಸ್ಥಳಕ್ಕೆ ತೆರಳಿ ಎಲ್ಲಾ ಆಯಾಮ ಗಳಲ್ಲಿ ಪರಿಶೀಲಿಸಿ, ಕೂಡಲೇ ಅಲ್ಲಿಯ ಸಮೀಪದಲ್ಲಿ ಲಭ್ಯವಿರುವ ಸಿಸಿಟಿವಿಗಳನ್ನು ಪರಿಶೀಲಿಸಿದರು. ಅದರಲ್ಲಿ ಪಲ್ಸರ್ ಬೈಕ್ನಲ್ಲಿ ಮೂವರು ಆರೋಪಿಗಳು ಬಂದು ಕೃತ್ಯ ಎಸಗಿರುವುದು ಕಂಡುಬಂತು. ಕೂಡಲೇ ಜಿಲ್ಲಾ ನಿಯಂತ್ರಣ ಕೊಠಡಿಯ ಮೂಲಕ ಜಿಲ್ಲೆಯ ಎಲ್ಲಾ ಚೆಕ್ಪೋಸ್ಟ್ಗಳಿಗೆ ಮಾಹಿತಿ ನೀಡಿ, ಸಿಸಿಟಿವಿ ಫೂಟೇಜ್ಗಳನ್ನು ಕಳುಹಿಸಲಾಯಿತು.
ಅದರಂತೆ ಎಲ್ಲಾ ಕಡೆ ಸರಿಯಾದ ರೀತಿಯಲ್ಲಿ ನಾಕಾಬಂದಿ ನಡೆಸಿ ಆರೋಪಿಗಳನ್ನು ಕೃತ್ಯ ನಡೆದ ಕೇವಲ ಮೂರರಿಂದ ನಾಲ್ಕು ಗಂಟೆಯ ಒಳಗಾಗಿ ಶಿರೂರ ಚೆಕ್ ಪೋಸ್ಟ್ನಲ್ಲಿ ಬೈಂದೂರು ಪೊಲೀಸರು ಆರೋಪಿಗಳನ್ನು ತಡೆದು ನಿಲ್ಲಿಸಿ, ಶಿರ್ವ ಪೊಲೀಸರ ವಶಕ್ಕೆ ನೀಡಿದರು.
ಶಿರ್ವ ಪೊಲೀಸರು ಆರೋಪಿಗಳಿಂದ ಒಂದು ಬಂಗಾರದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಕಾಪು ವೃತ್ತ ನಿರೀಕ್ಷಿಕ ಕಾಪು ಅಜ್ಜತ್ ಅಲಿ ನೇತೃತ್ವದಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಬೈಂದೂರು ಪಿಎಸ್ಐ ಸುನಿಲ್ ಕುಮಾರ್, ಶಿರ್ವ ಠಾಣೆಯ ದಯಾನಂದ ಪ್ರಭು, ಅನ್ವರ್ ಅಲಿ, ಹರೀಶ, ಯಲಾಲ್ಲಿಂಗ ಸುರೇಶ ಹಾಗೂ ಬೈಂದೂರು ಠಾಣೆಯ ಸಿಬ್ಬಂದಿಗಳು ನಡೆಸಿದ್ದಾರೆ.
Comments are closed.