ಕರಾವಳಿ

ಕಾಪು | ಯುವಕನ ಕೊಲೆ ಯತ್ನ ಪ್ರಕರಣ: ಆರೋಪಿ ದೋಷಿಯೆಂದು ಶಿಕ್ಷೆ ಪ್ರಕಟಿಸಿದ ಉಡುಪಿ ನ್ಯಾಯಾಲಯ

Pinterest LinkedIn Tumblr

ಉಡುಪಿ: ಕ್ಷುಲ್ಲಕ‌ ಕಾರಣಕ್ಕೆ ಕಾಪುವಿನ ಕೋಟೆ ಗ್ರಾಮದ ಯುವಕನೋರ್ವನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿ ದೋಷಿ ಎಂದು ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣವರ್ ಅವರು ತೀರ್ಪು ಪ್ರಕಟಿಸಿದ್ದಾರೆ.

ಅಭಿಷೇಕ್ ಶ್ರೀಯಾನ್ ಎಂಬಾತ ದೋಷಿಯಾಗಿದ್ದು  ಕೊಲೆಯತ್ನ ಅಪರಾದಕ್ಕೆ 3 ವರ್ಷ 10 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ,  20 ಸಾವಿರ ದಂಡ ವಿಧಿಸಿದ್ದು, ಇದೇ ಕೃತ್ಯದಡಿ ದಾಖಲಾದ ಇತರ ಮೂರು ವಿವಿಧ ಅಪರಾಧಗಳಿಗೆ ಒಟ್ಟು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿಯಿಂದ ವಸೂಲಾದ ದಂಡದ ಹಣದ ಪೈಕಿ 45 ಸಾವಿರ ರೂ. ಹಣವನ್ನು ದೂರುದಾರನಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ತೀರ್ಪಿನಲ್ಲಿ ಆದೇಶಿಸಲಾಗಿದೆ.

ಘಟನೆ ಹಿನ್ನೆಲೆ: 2021 ಜೂನ್ 22 ರಂದು ಕಾಪು ತಾಲೂಕು ಕೋಟೆ ಗ್ರಾಮದ ನಿವಾಸಿಯಾದ ಶರತ್ ದೇವಾಡಿಗನು ತನ್ನ ಸ್ನೇಹಿತನ ಹುಟ್ಟು ಹಬ್ಬವನ್ನು ಆಚರಿಸಲು ಸ್ನೇಹಿತರೊಂದಿಗೆ ಕೋಟೆ ಗ್ರಾಮದ ಪಾಪನಾಶಿನಿ ಹೊಳೆಯ ಬದಿಯಲ್ಲಿ ಕೂಡಿಕೊಂಡು ಮಾತನಾಡಿಕೊಂಡಿರುವಾಗ ರಾತ್ರಿ ಸುಮಾರು 11.00 ಗಂಟೆಯ ಸಮಯಕ್ಕೆ ಆರೋಪಿ ಅಭಿಷೇಕ್ ಶ್ರೀಯಾನ್ ಬೈಕ್‌ನಲ್ಲಿ ಬಂದು ಶರತ್ ದೇವಾಡಿಗನ ಬಳಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಶರತ್‌ಗೆ ಇರಿದಿದ್ದ. ಅಲ್ಲೇ ಇದ್ದ ಆತನ ಸ್ನೇಹಿತರು ಶರತ್ ರಕ್ಷಣೆಗೆ ಬಂದಿದ್ದರು. ಚೂರಿಯನ್ನು ಅಲ್ಲಿಯೇ ಎಸೆದು ಬೈಕಿನಲ್ಲಿ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದ. ಗಂಭೀರ ಗಾಯಗೊಂಡ ಶರತ್‌ನನ್ನು ಸ್ನೇಹಿತರು ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆತ ಶಸ್ತ್ರ ಚಿಕಿತ್ಸೆಗೆ ಒಳಪಟ್ಟು 7 ದಿನಗಳ ಕಾಲ ಒಳರೋಗಿಯಾಗಿ ದಾಖಲಾಗಿ ಚೇತರಿಸಿಕೊಂಡಿದ್ದ. ಈ ಬಗ್ಗೆ ಶರತ್‌ ದೇವಾಡಿಗ ನೀಡಿದ ದೂರಿನ ಆಧಾರದಲ್ಲಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿ ಕಾಪು ಪೊಲೀಸ್ ಠಾಣೆ ಅಂದಿನ ಪಿಎಸ್ಐ ರಾಘವೇಂದ್ರ ಸಿ. ರವರು ತನಿಖೆ ನಡೆಸಿ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿಯವರು ವಾದ ಮಂಡಿಸಿದ್ದಾರೆ.

Comments are closed.