ಕುಂದಾಪುರ: ತಾಲೂಕಿನ ತಲ್ಲೂರು ಮೂಲಕ ನೇರಳಕಟ್ಟೆ-ಆಜ್ರಿ-ಸಿದ್ದಾಪುರ ರಸ್ತೆಯ ಶೆಟ್ರಕಟ್ಟೆ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ ಟಿಪ್ಪರ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಟಿಪ್ಪರ್ ಚಾಲಕ ರಾಘವೇಂದ್ರ ಹಾಗೂ ಟಿಪ್ಪರ್ ಮಾಲಕ ಶ್ರೀಧರ್ ಬಂಧಿತರು. ಕೆಂಪು ಮಣ್ಣು ಜಾಗದ ಮಾಲಿಕ ಮಂಜುನಾಥ್ ಮೇಲೆಯೂ ಪ್ರಕರಣ ದಾಖಲಾಗಿದೆ.
ಸೋಮವಾರ ಸಂಜೆ 3.45ಕ್ಕೆ ಕುಂದಾಪುರದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡ ಕೆಎಸ್‌ಆರ್‌ಟಿಸಿ ಬಸ್ ತಲ್ಲೂರು-ನೇರಳಕಟ್ಟೆ ಮಾರ್ಗವಾಗಿ ಆಜ್ರಿ ಕಡೆಗೆ ತೆರಳುತ್ತಿದ್ದಾಗ 4:20 ಸುಮಾರಿಗೆ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಎದುರಿನಿಂದ ಬಂದ ಟಿಪ್ಪರ್ ಬಸ್‌ನ ಬಲ ಭಾಗಕ್ಕೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿದ್ದ 39 ಮಂದಿ ಪ್ರಯಾಣಿಕರ ಪೈಕಿ 18 ಮಂದಿಗೆ ಗಾಯಗಳಾಗಿತ್ತು. ಇವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸಹಿತ ಮೂರು ಮಂದಿ ತೀವೃ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿದ್ದಾರೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ಕುಂದಾಪುರ ಘಟಕದ ಮುಖ್ಯಸ್ಥರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಕುಂದಾಪುರ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಠಾಣಾಧಿಕಾರಿ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ.
ದಾಖಲೆಗಳು ಇರಲಿಲ್ಲ.!: ಟಿಪ್ಪರ್ ಚಾಲಕನು ವಾಹನದಲ್ಲಿ ಮಣ್ಣು ಸಾಗಾಟದ ಪರವಾನಿಗೆ ನಿಯಮ ಉಲ್ಲಂಘಿಸಿ ಮಿತಿ ಮೀರಿದ ಕೆಂಪು ಮಣ್ಣು ತುಂಬಿಸಿಕೊಂಡು ಕಿರಿದಾದ ರಸ್ತೆಯಲ್ಲಿ ಓಡಿಸಿದ್ದು ಎದುರುನಿಂದ ಬರುವ ವಾಹನಗಳಿಗೆ ಅಪಘಾತವಾಗಿ ಎದುರಿನ ವಾಹನಗಳಲ್ಲಿರುವ ಪ್ರಯಾಣಿಕರಿಗೆ ಸಾವು ನೋವು ಉಂಟಾಗುವ ಸಾಧ್ಯತೆ ಇದೆ ಎನ್ನುವ ಅರಿವಿದ್ದರೂ ಕೂಡ ವಿಮಾ ಪತ್ರ (ಇನ್ಸೂರೆನ್ಸ್), ಪರವಾನಿಗೆ ಇಲ್ಲದ ಟಿಪ್ಪರ್‌ನಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ: ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಮೂವರ ಪೈಕಿ ಓರ್ವರು ಚೇತರಿಸಿಕೊಳ್ಳುತ್ತಿದ್ದು ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವರನ್ನು ತೀವೃ ನಿಗಾ ಘಟಕದಲ್ಲಿರಿಸಿ 48 ಗಂಟೆಗಳ ಕಾಲ ನಿಗದಲ್ಲಿರಿಸಲಾಗಿದೆ (ಅಬ್ಸರ್‌ವೇಶನ್) ಎಂದು ಕೆಎಂಸಿ ವೈದ್ಯಕೀಯ ಮೂಲಗಳು ತಿಳಿಸಿದೆ.
Comments are closed.