ಕುಂದಾಪುರ: ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಮೂಲಸೌಕರ್ಯ, ಶಿಕ್ಷಕರ ಕೊರತೆ ಕಾರಣವಾಗಿದ್ದು ಇದಕ್ಕೆ ಆಳುವ ಸರಕಾರಗಳೇ ನೇರ ಹೊಣೆಯಾಗಿದೆ. ಸರಕಾರಿ ಶಾಲೆಗಳನ್ನು ಉಳಿಸಿ-ಬೆಳೆಸುವ ಜೊತೆಗೆ ಎಸ್ಡಿಎಂಸಿ ಸಬಲೀಕರಣ, ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ರಾಜಕೀಯ, ಜಾತಿ-ಧರ್ಮ ರಹಿತವಾಗಿ ಹಗಲಿರುಳು ಕೆಲಸ ಮಾಡುತ್ತಿದೆ ಎಂದು ಎಸ್.ಡಿ.ಎಮ್.ಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಹೇಳಿದರು.


ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕ, ಶಿವಪ್ರಸಾದ್ ಗ್ರಾಂಡ್ ಕುಂದಾಪುರ ಇವರ ಸಹೋಗದೊಂದಿಗೆ ಮಗು ಮತ್ತು ಕಾನೂನು ಕೇಂದ್ರ, ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಬೆಂಗಳೂರು ಸುಗಮಕಾರರಾಗಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಸಿದ್ದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಶುಕ್ರವಾರ ಇಲ್ಲಿನ ಶಿವಪ್ರಸಾದ್ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆಗಳ ಮೂಲಕ ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಹೆಚ್ಚಿಸುವ ಕೆಲಸವಾಗುತ್ತಿದೆ. ಆರೋಗ್ಯ ಹಾಗೂ ಶಿಕ್ಷಣ ಉಚಿತವಾಗಿ ಸಿಕ್ಕರೆ ನೆಮ್ಮದಿ ಜೀವನ ಸಾಧ್ಯ. ಅಕ್ಷರ ಜ್ಞಾನ ನೀಡಿದ ಸರಕಾರಿ ಶಾಲೆಗಳ ಅಭ್ಯುದಯಕ್ಕೆ ಅಲ್ಲಿನ ಹಳೆ ವಿದ್ಯಾರ್ಥಿಗಳ ಒಗ್ಗೂಡುವಿಕೆಯೂ ಅಗತ್ಯವಾಗಿದ್ದು ಕಾನೂನು ಬದ್ಧವಾಗಿ ಹಳೆ ವಿದ್ಯಾರ್ಥಿ ಸಂಘ ರಚಿಸಿ ಅದಕ್ಕೆ ಆ ಶಾಲೆ ಮುಖ್ಯೋಪಧ್ಯಾಯರು ಕಾರ್ಯದರ್ಶಿಯಾಗಿ ನೇಮಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಕೋಟೇಶ್ವರ ಗೀತಾ ಹೆಚ್.ಎಸ್.ಎನ್ ಫೌಂಡೇಶನ್ನ ಅಧ್ಯಕ್ಷ, ಎಸ್.ಡಿ.ಎಮ್.ಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾ ಘಟಕದ ಮಹಾಪೋಷಕರಾದ ಶಂಕರ್ ಐತಾಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಶಾಲೆ ಅಭಿವೃದ್ಧಿ ಮಾಡುವ ಸೇವಾಕೈಂಕರ್ಯ ತೃಪ್ತಿ ನೀಡುತ್ತದೆ. ಹೀಗಾಗಿ ಅಮಾಸೆಬೈಲು ಸರಕಾರಿ ಶಾಲೆಯನ್ನು ಅಭಿವೃದ್ಧಿಗೊಳಿಸಲಾಗಿದ್ದು ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದರು.
ಎಸ್.ಡಿ.ಎಮ್.ಸಿ ಸಮನ್ವಯ ಕೇಂದ್ರ ವೇದಿಕೆ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ. ನಾಗರಾಜ ಮಾತನಾಡಿ, ಸರಕಾರಿ ಶಾಲೆಗಳ ಉಳಿವು-ಬೆಳವಣಿಗೆ ದೃಷ್ಟಿಯಿಂದ, ಎಸ್.ಡಿ.ಎಂ.ಸಿ ಹಕ್ಕು, ಕರ್ತವ್ಯಗಳನ್ನು ಜಾಗೃತಿಗೊಳಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಮನದಟ್ಟು ಮಾಡುವ ಸಲುವಾಗಿ ಸಮನ್ವಯ ವೇದಿಕೆ 2013 ರಲ್ಲಿ ಆರಂಭಗೊಂಡಿದ್ದು ಕಟ್ಟಕಡೆಯ ಮಗು ಕೂಡ ಗುಣಮಟ್ಟದ ಶಿಕ್ಷಣ ಪಡೆಯಲು ಇಲಾಖೆಗಳ ಮಾರ್ಗದರ್ಶನ, ಸಹಯೋಗದಲ್ಲಿ ಸಮನ್ವಯ ವೇದಿಕೆ ರಾಜಕೀಯ ರಹಿತ, ಸ್ವಹಿತಾಸಕ್ತಿ ರಹಿತ, ಜಾತಿ ರಹಿತ ಸಂಘಟನೆಯಾಗಿ ಸರ್ವಧರ್ಮದ ದೇಗುಲಗಳಾದ ಸರಕಾರಿ ಶಾಲೆಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿಜೇತ ಮಕ್ಕಳಿಗೆ ಪ್ರಮಾಣಪತ್ರ ಹಾಗೂ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕುಂದಾಪುರ ಪುರಸಭಾ ಸದಸ್ಯ ಅಬು ಮೊಹಮ್ಮದ್ ಮುಜಾವರ್, ಎಸ್.ಡಿ.ಎಮ್.ಸಿ ಸಮನ್ವಯ ಕೇಂದ್ರ ವೇದಿಕೆ ಕರ್ನಾಟಕ ರಾಜ್ಯ ಸಂಚಾಲಕ ಮೊಯಿದಿನ್ ಕುಟ್ಟಿ, ಸಂಘಟನೆಯ ಪುರಸಭಾ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್ ಮೊದಲಾದವರಿದ್ದರು.
ಎಸ್.ಡಿ.ಎಮ್.ಸಿ ಸಮನ್ವಯ ಕೇಂದ್ರ ವೇದಿಕೆ ಜಿಲ್ಲಾ ಕಾರ್ಯದರ್ಶಿ ದೀಪಾ ಜಪ್ತಿ ನಿರೂಪಿಸಿ, ಕುಂದಾಪುರ ತಾಲೂಕು ಘಟಕದ ಕಾರ್ಯದರ್ಶಿ ಪ್ರಮೋದಾ ಕುಶಲ್ ಶೆಟ್ಟಿ ಸ್ವಾಗತಿಸಿ, ಪುರಸಭಾ ಘಟಕದ ಕಾರ್ಯದರ್ಶಿ ವರದಾ ಸುಧಾಕರ್ ಆಚಾರ್ಯ ವಂದಿಸಿದರು.
Comments are closed.