ಕರಾವಳಿ

ಜಾನುವಾರು ಕಳವಿಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ ಗಂಗೊಳ್ಳಿ ಪೊಲೀಸರು

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದನ ಕಳವಿಗೆ ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಜು. 7ರಂದು ನಾಡಾ ಗ್ರಾಮ ಪಂಚಾಯತ್ ಸಮೀಪ ಬಿಳಿ ಬಣ್ಣದ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಲಗಿದ್ದ ದನಗಳನ್ನು ಕಾರಿಗೆ ತುಂಬಿ ಕೊಂಡೊಯ್ಯಲು ಪ್ರಯತ್ನಿಸಿದ ಬಗ್ಗೆ ಕೇಸ್ ದಾಖಲಾಗಿತ್ತು.

ಆರೋಪಿಗಳ ಪತ್ತೆಗೆ ಗಂಗೊಳ್ಳಿ ಠಾಣೆಯಿಂದ ವಿಶೇಷ ತಂಡ ರಚಿಸಿದ್ದು ಸೋಮವಾರ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಾದ ಬ್ರಹ್ಮಾವರ ತಾಲೂಕು ಬೈಕಾಡಿಯ ಹೊನ್ನಾಳದ ನೌಫಲ್ (23) ಮತ್ತು ಗುಲ್ವಾಡಿ ಮಾವಿನಕಟ್ಟೆಯ ನಿಶಾದ್ (23) ಅವರನ್ನು ಬಂಧಿಸಿ ಮಂಗಳವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು ಹಾಗೂ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಗಂಗೊಳ್ಳಿ ಪಿಎಸ್‌ಐ ಪವನ್ ನಾಯಕ್ ಹಾಗೂ ಬಸವರಾಜ ಕನಶೆಟ್ಟಿ, ಸಿಬಂದಿಗಳಾದ ಕೃಷ್ಣ ದೇವಾಡಿಗ, ಚೇತನ್, ಶಾಂತಾರಾಮ ಶೆಟ್ಟಿ, ಸಂದೀಪ ಕುರಣಿ, ಪ್ರಸನ್ನ ಮತ್ತು ರಾಘವೇಂದ್ರ ಪೂಜಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

Comments are closed.