ಕರಾವಳಿ

ದೇಶದ 2ನೇ ಅತೀ ಉದ್ದದ ಸಿಗಂದೂರು ಸೇತುವೆ ಜುಲೈ 14ರಂದು ಲೋಕಾರ್ಪಣೆ: ಸಂಸದ ಬಿ.ವೈ ರಾಘವೇಂದ್ರ 

Pinterest LinkedIn Tumblr

ಈ ಸೇತುವೆಗೆ ಶ್ರೀ ಸಿಗಂಧೂರು ಚೌಡೇಶ್ವರಿ ಸೇತುವೆ ಎಂದು ನಾಮಕರಣ ಮಾಡ ಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ: ಬಿ.ವೈ.ಆರ್

ಶಿವಮೊಗ್ಗ: ಶಿವಮೊಗ್ಗ: ಸಾಗರ ತಾಲ್ಲೂಕಿನ ಅಂಬಾರಗೋಡ್ಲು- ಕಳಸವಳ್ಳಿ ನಡುವೆ ನಿರ್ಮಿಸಲಾಗಿರುವ  ಸೇತುವೆಯನ್ನು ಕೇಂದ್ರದ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಜುಲೈ 14ರಂದು ಲೋಕಾರ್ಪಣೆ ಮಾಡಲಿದ್ದಾರೆ. 473 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 2.44 ಕಿ.ಮೀ ಉದ್ದದ ಈ ಸೇತುವೆಯು ಗುಜರಾತಿನ ಓಖಾ ನಂತರ ದೇಶದಲ್ಲಿಯೇ ಎರಡನೇ ಅತಿ ದೊಡ್ಡ ತೂಗು ಸೇತುವೆ ಆಗಿದೆ. ಉದ್ಘಾಟನೆಯಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಸಹ ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾಹಿತಿ ನೀಡಿದರು.

ಮಲೆನಾಡಿನ ಪ್ರಮುಖ ಯಾತ್ರಾ ಸ್ಥಳ ಸಿಗಂದೂರಿಗೆ ಈ ಸೇತುವೆ ಸಂಪರ್ಕ ಕಲ್ಪಿಸುವ ಕಾರಣಕ್ಕೆ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವ ಸೇತುವೆಗೆ ‘ಸಿಗಂದೂರು ಶ್ರೀ ಚೌಡೇಶ್ವರಿ ಸೇತುವೆ’ ಎಂದು ನಾಮಕರಣ ಮಾಡಲು ಮಲೆನಾಡು ಭಾಗದ ಬಿಜೆಪಿ ಮುಖಂಡರು ಸೇರಿ ನಿರ್ಧರಿಸಿದ್ದೇವೆ. ಆ ಬಗ್ಗೆ ಎನ್‌ಒಸಿ ಕೊಟ್ಟು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಿ ಎಂದು ಒತ್ತಾಯಿಸಿದರು.

ಈ ಸೇತುವೆಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಜತೆಗೆ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವಲ್ಲಿ ಈ ಸೇತುವೆ ಮುಖ್ಯ ಪಾತ್ರವಹಿಸಲಿದೆ. ಶರಾವತಿ ಹಿನ್ನೀರಿನ ಜನರ ಮತ್ತು ಮಲೆನಾಡು-ಕರಾವಳಿ ಜನರ ಬಹುಕಾಲದ ಕನಸು ನನಸಾಗುವ ಸಮಯ ಸನಿಹಗೊಂಡಿದೆ ಎಂದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಮುಖಂಡರ ಪ್ರಯತ್ನದ ಫಲದಿಂದ ಸೇತುವೆ ನಿರ್ಮಾಣವಾಗಿದೆ ಎಂದು ರಾಘವೇಂದ್ರ ಹೇಳಿದರು.

ದೇಶದ ಎರಡನೇ ಅತೀ ಉದ್ದದ ಕೇಬಲ್ ಆಧಾರಿತ ಸೇತುವೆ ಇದಾಗಿದ್ದು ಈ ಸೇತುವೆ ಸುಮಾರು 2.14 ಕಿ.ಮೀ ಉದ್ದ ಹಾಗೂ 16 ಮೀಟ‌ರ್ ಅಗಲವಿದೆ. ಸೇತುವೆ ಕಾಮಗಾರಿಯು 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿತ್ತು.

Comments are closed.