ಬೆಂಗಳೂರು: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸ್ಥಳ ಮಹಜರುಗಾಗಿ ಕರೆಯುತ್ತಿದ್ದ ವೇಳೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ತಲಘಟ್ಟಪುರ ಪೊಲೀಸ್ ಠಾಣೆ ಪಿಎಸ್ಐ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.
ಮೆಹಬೂಬ್ ಗುಡ್ಡಹಳ್ಳಿ (40) ಮೃತ ಪೊಲೀಸ್ ಉಪನಿರೀಕ್ಷಕ.
ವಿಜಯಪುರ ಮೂಲದ ಮೆಹಬೂಬ್ ಗುಡ್ಡಹಳ್ಳಿ ಅವರು ಕಳೆದ 1 ವರ್ಷದಿಂದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಇವರ ಸಹೋದರ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾತ್ರಿ ಸುಮಾರು 2.30ಕ್ಕೆ ಸೂರ್ಯನಗರ ಸಮೀಪದ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಬರುವಾಗ ಕಾರು ಕೆಟ್ಟು ನಿಂತಿದೆ. ಈ ವೇಳೆ ಕೆಳಗೆ ಇಳಿದು ಕಾರನ್ನು ಪರಿಶೀಲಿಸುವಾಗ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ಟ್ರಕ್ ಏಕಾಏಕಿ ಮೆಹಬೂಬ್ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನು ಅಪಘಾತದ ಬಳಿಕ ಕಾರಿನಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದು ಅವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

Comments are closed.