ಕರಾವಳಿ

ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣದ ಆರೋಪಿ ಯುವತಿ ಸೆರೆ | ಹೆಚ್ಚಿನ ತನಿಖೆಗಾಗಿ ಉಡುಪಿ ಪೊಲೀಸ್ ಕಸ್ಟಡಿಗೆ: ಎಸ್ಪಿ

Pinterest LinkedIn Tumblr

ಉಡುಪಿ: ಶಾಲೆ, ಆಸ್ಪತ್ರೆ ಮತ್ತು ಕ್ರೀಡಾಂಗಣಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆಯ ಇಮೇಲ್‌ಗಳನ್ನು ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಅಹಮದಾಬಾದ್ ಪೊಲೀಸರು ಚೈನ್ನೆ ಮೂಲದ ಆರೋಪಿ ಇಂಜಿನಿಯರ್ ಯುವತಿಯನ್ನು ಬಂಧಿಸಿದ್ದು, ಇದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಉಡುಪಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 

ಜೂ.16ರಂದು ಉಡುಪಿ ಬೈಲಕೆರೆಯಲ್ಲಿರುವ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗೆ ಹುಸಿ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು, ಇದರಲ್ಲಿ ನಿಮ್ಮ ಶಾಲೆಯಲ್ಲಿ ಬಾಂಬ್ ಸ್ಪೋಟಿಸಿದರೆ ಮಕ್ಕಳು ಸಾಯುತ್ತಾರೆ. ಮಕ್ಕಳು ಸತ್ತರೆ ಮಾತ್ರ ಪೋಷಕರು ಪ್ರತಿಭಟನೆ ಮಾಡುತ್ತಾರೆ ಮತ್ತು ಪೊಲೀಸರು ಸರಿಯಾದ ತನಿಖೆ ನಡೆಸಿ ಹೈದರಾಬಾದಿನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುತ್ತಾರೆ ಎಂದು ಬರೆಯಲಾಗಿತ್ತು. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಇಮೇಲ್ ಸಂದೇಶ ಕಳುಹಿಸಿ ಶಾಲೆಗಳು, ಆಸ್ಪತ್ರೆಗಳು ಮತ್ತು ಕ್ರೀಡಾಂಗಣಗಳಿಗೆ ಬಾಂಬ್ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಗುಜರಾತಿನ ಅಹಮದಾಬಾದ್ ಪೊಲೀಸರು ಚೆನ್ನೈಯ ಆರೋಪಿ ಇಂಜಿನಿಯರ್ ಯುವತಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

‘ಈ ಹಿನ್ನೆಲೆಯಲ್ಲಿ ಉಡುಪಿ ಶಾಲೆಯ ಬಾಂಬ್ ಬೆದರಿಕೆ ಪ್ರಕರಣದ ತನಿಖೆಗಾಗಿ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ನಮ್ಮ ಕಸ್ಟಡಿಗೆ ನೀಡುವಂತೆ ಅಹಮದಾಬಾದ್‌ ಪೊಲೀಸರಿಗೆ ಪತ್ರ ಬರೆಯಲಾಗುವುದು. ಅವರ ತನಿಖೆ ಮುಗಿದ ಬಳಿಕ ಆರೋಪಿಯನ್ನು ನಮ್ಮ ವಶಕ್ಕೆ ನೀಡುವ ಸಾಧ್ಯತೆ ಇದೆ. ಅದರಂತೆ ಉಡುಪಿಯ ಪ್ರಕರಣದ ತನಿಖೆಯನ್ನು ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಹರಿರಾಮ್ ಶಂಕ‌ರ್ ತಿಳಿಸಿದ್ದಾರೆ.

ಈಮೈಲ್ ಮೂಲಕ ಬಾಂಬ್ ಬೆದರಿಕೆಯ ಸಂದೇಶ ಕಳುಹಿಸಲು ಆಕೆ ಫೇಕ್ ಈಮೈಲ್ ಐಡಿ, ಫೇಕ್ ವಿಪಿಎನ್‌ಗಳು, ವರ್ಚುವಲ್ ನಂಬರ್ಸ್ ಹಾಗೂ ಡಾರ್ಕ್ ವೆಬ್ ಟೂಲ್‌ಗಳನ್ನು ಬಳಸುತಿದ್ದಳು ಎಂದು ತಿಳಿದುಬಂದಿದೆ.

ಒಟ್ಟು 21 ಬೆದರಿಕೆಯ ಈಮೈಲ್‌ಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಇವುಗಳನ್ನು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ರಾಜಸ್ತಾನ, ತಮಿಳುನಾಡು, ದಿಲ್ಲಿ, ಕೇರಳ, ಬಿಹಾರ, ಪಂಜಾಬ್, ತೆಲಂಗಾಣ, ಹರ್ಯಾಣ, ಮಧ್ಯಪ್ರದೇಶಗಳಿಗೆ ಕಳುಹಿಸಲಾಗಿದೆ. ಗುಜರಾತ್‌ನ ಜಿನೀವಾ ಲಿಬಲರ್ ಸ್ಕೂಲ್ ಅಲ್ಲದೇ ಮೊಟೇರಾದ ನರೇಂದ್ರ ಮೋದಿ ಸ್ಟೇಡಿಯಂಗೂ ಬೆದರಿಕೆ ಈಮೈಲ್ ಹೋಗಿವೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ.

ಅಹಮದಾಬಾದ್‌ನ ಜಂಟಿ ಪೊಲೀಸ್‌ ಕಮಿಷನ‌ರ್ ಶರದ್‌ ಸಿಂಘಲ್, ಡಿಸಿಪಿ ಲವಿನಾ ಸಿನ್ಹಾ ಹಾಗೂ ಎಸಿಪಿ ಹಾರ್ದಿಕ್ ಮಕಾಡಿಯಾ ನೇತೃತ್ವದಲ್ಲಿ ಗುಜರಾತ್ ಪೊಲೀಸರು ಈ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.

Comments are closed.