ಕರಾವಳಿ

ಜೂನ್ 24ಕ್ಕೆ ಕೋಟೇಶ್ವರ ಸೇವಾ ಟ್ರಸ್ಟ್‌ನ ವಿವಿಧ ಯೋಜನೆಗಳ ಲೋಕಾರ್ಪಣೆ

Pinterest LinkedIn Tumblr

ಕುಂದಾಪುರ: ಕೋಟೇಶ್ವರ ಸೇವಾ ಟ್ರಸ್ಟ್ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದು ಟ್ರಸ್ಟ್‌ನ ನೂತನ ಕಚೇರಿ ಉದ್ಘಾಟನೆಯೊಂದಿಗೆ ಸ್ವಚ್ಛ ಭಾರತ ಅಭಿಯಾನ ಯೋಜನೆಯ ಲೋಕಾರ್ಪಣಾ ಕಾರ್ಯಕ್ರಮದೊಂದಿಗೆ ಗೋಪಾಡಿ ರುಕ್ಮಿಣಿ ಶ್ರೀನಿವಾಸ ರಂಗಮಂಟಪವನ್ನು ಉದ್ಘಾಟಿಸಿ ಹಸ್ತಾಂತರಿಸುವ ಕಾರ್ಯಕ್ರಮಗಳು ಜೂನ್ 24 ಮಂಗಳವಾರ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ನೂತನವಾಗಿ ನಿರ್ಮಿಸಿರುವ “ಕೋಟೇಶ್ವರ ಸೇವಾ ಟ್ರಸ್ಟ್” ನ ಕಚೇರಿಯಲ್ಲಿ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಆಶೀರ್ವಚನ ನಡೆಯಲಿದೆ ಎಂದು ಕೋಟೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಗೋಪಾಡಿ ಶ್ರೀನಿವಾಸ ರಾವ್ ಹೇಳಿದರು.

ಅವರು ಸೋಮವಾರಂದು ಕುಂದಾಪುರದ ಕೇಕ್‍ವಾಲಾದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಮೂಲ ಸೌಕರ್ಯ ಒದಗಿಸಲು ಹಲವು ವರ್ಷಗಳಿಂದ ದೇವಸ್ಥಾನದ ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಮಿತ್ರದಳ ಕೋಟೇಶ್ವರ ಇತ್ಯಾದಿ ಸಂಘಟನೆಗಳು ಪ್ರಯತ್ನ ಪಡುತ್ತಿದ್ದರು. ಜಾಗದ ಕೊರತೆಯಿಂದ ಈ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗಿರಲಿಲ್ಲ. ಇದೀಗ “ಕೋಟೇಶ್ವರ ಸೇವಾ ಟ್ರಸ್ಟ್” ನೇತೃತ್ವದಲ್ಲಿ ಸಮಾನ ಮನಸ್ಕ ಟ್ರಸ್ಟಿಗಳನ್ನಾಗಿ ಸೇರಿಸಿಕೊಂಡು ಈ ಯೋಜನೆಯು ಸಾಕಾರವಾಗುತ್ತಿದೆ ಎಂದರು.

ಕೋಟೇಶ್ವರ ಸೇವಾ ಟ್ರಸ್ಟ್ ನೂತನ ಕಚೇರಿಯನ್ನು ಹಾಗೂ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪ್ರಥಮ ಆದ್ಯತೆಯಲ್ಲಿ ನೂತನವಾಗಿ ನಿರ್ಮಿಸಿರುವ ಯೋಜನೆಯನ್ನು ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಮುಜರಾಯಿ ಸಚಿವರು ರಾಮಲಿಂಗ ರೆಡ್ಡಿಯವರು ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ 10.30ಕ್ಕೆ ಕೋಟೇಶ್ವರ ವಾದಿರಾಜ ಕಲ್ಯಾಣ ಮಂಟಪದಲ್ಲಿ ಜರುಗುವ ಸಭಾ ಕಾರ್ಯಕ್ರಮ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ, ಸಮಾಜ ಸೇವಕರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಗಿಣಿ ದೇವಾಡಿಗ, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಪ್ರಕಾಶ್ ಜಿ ಪೂಜಾರಿ, ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಗೋಪಾಲ ಕೃಷ್ಣ ಶೆಟ್ಟಿ ಮಾರ್ಕೊಡು. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ದೇವಳದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ಪ್ರಸನ್ನಕುಮಾರ್ ಐತಾಳ್, ಟ್ರಸ್ಟಿನ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.

ರಂಗ ಮಂಟಪ ಉದ್ಘಾಟನೆ: ಗೋಪಾಡಿ ಶ್ರೀನಿವಾಸ ರುಕ್ಮಿಣಿ ಫೌಂಡೇಶನ್ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಪ್ರಾಥಮಿಕ ವಿಭಾಗ ಶತಮಾನೋತ್ಸವ ಸಮಿತಿ ಇವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ವಿದ್ಯಾರ್ಥಿಗಳ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಹಿತ ದೃಷ್ಟಿಯಿಂದ ಜಂಟಿಯಾಗಿ ನಿರ್ಮಿಸಿದ ಸುಸಜ್ಜಿತವಾದ ಮತ್ತು ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಗೋಪಾಡಿ ರುಕ್ಮಿಣಿ ಶ್ರೀನಿವಾಸ ರಂಗಮಂಟಪವನ್ನು ಮಧ್ಯಾಹ್ನ 2 ಗಂಟೆಗೆ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಕರ್ನಾಟಕ ಸರ್ಕಾರದ ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಉದ್ಘಾಟಿಸಿ, ಹಸ್ತಾಂತರಿಸುವ ಕಾರ್ಯಕ್ರಮ ಜರುಗಲಿದೆ ಎಂದರು.

ಈ ರಂಗಮಂಟಪವನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದು, ಸುಸಜ್ಜಿತವಾದ ಗ್ರೀನ್ ರೂಮ್ ಹೊಂದಿದೆ. ಟ್ರಸ್ಟಿನಿಂದ ಮಾಡುವ ಎಲ್ಲಾ ಯೋಜನೆಗಳ ನಿರ್ವಹಣೆಯನ್ನು 15 ವರ್ಷಗಳ ಕಾಲ ಟ್ರಸ್ಟ್ ನಿರ್ವಹಿಸಲಿದೆ. ಈ ಬಗ್ಗೆ ಮೊದಲೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದರು.ಗೋಪಾಡಿ ರುಕ್ಮಿಣಿ ಶ್ರೀನಿವಾಸ ರಂಗಮಂಟಪದ ಉದ್ಘಾಟನೆಯ ಬಳಿಕ ಸಂಜೆ 5 ಗಂಟೆಗೆ ಭಜನಾ ಕಾರ್ಯಕ್ರಮ ಹಾಗೂ ನೃತ್ಯ ಸಿಂಚನ ಕುಂದಾಪುರ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ರಾಜಗೋಪಾಲ ಆಚಾರ್, ಕೋಟೇಶ್ವರ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ ಬೆಟ್ಟಿನ್, ಕೃಷ್ಣದೇವ ಕಾರಂತ, ಪ್ರಶಾಂತ್ ಕಿಣಿ ಉಪಸ್ಥಿತರಿದ್ದರು.

Comments are closed.