ಬೈಂದೂರು: ಕಳೆದ 3-4 ದಿನಗಳಿಂದ ಬೈಂದೂರು ಭಾಗದಲ್ಲಿ ಎಡೆ ಬಿಡದೇ ಮಳೆಯಾಗುತ್ತಿದ್ದು, ಕೊಲ್ಲೂರು ಘಾಟಿ ಪ್ರದೇಶದಲ್ಲೂ ನಿರಂತರ ಮಳೆಯಿಂದಾಗಿ ಸೌಪರ್ಣಿಕಾ ನದಿ ಪಾತ್ರದ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ, ಮರವಂತೆ, ಭಾಗದಲ್ಲಿ ನೆರೆ ನೀರು ಮನೆಗಳಿಗೆ ನುಗ್ಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಮುಂಜಾನೆಯಿಂದ ಮಳೆ ಪ್ರಮಾಣ ತಗ್ಗಿದ್ದರಿಂದ ನಾವುಂದ-ಸಾಲ್ಬುಡದಲ್ಲಿ ಬಹುತೇಕ ನೆರೆ ಇಳಿಕೆಯಾಗಿದೆ.
ಇನ್ನೊಂದೆಡೆಯಲ್ಲಿ ಕಡಲ ಕೊರೆತ ಕೂಡ ಮುನ್ಸೂಚನೆ ಸಿಕ್ಕಿದೆ. ಕರಾವಳಿ ಭಾಗದಲ್ಲಿ ಮಳೆರಾಯನ ಆರ್ಭಟ ಹಿನ್ನೆಲೆಯಲ್ಲಿ ಮತ್ತು ತ್ರಾಸಿ -ಮರವಂತೆ ಬೀಚ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಮುದ್ರದ ನೀರಿಗೆ ಇಳಿಯದಂತೆ ಸೂಚನಾ ಫಲಕವನ್ನು ಗಂಗೊಳ್ಳಿ ಪೊಲೀಸರು ಅಳವಡಿಸಿದ್ದರೂ ಕೂಡ ಪ್ರವಾಸಿಗರು ಮತ್ತೆ ಫೋಟೋ, ಸೆಲ್ಪಿಗಾಗಿ ನೀರಿನತ್ತ ಸಾಗುವ ದೃಶ್ಯ ಕಂಡುಬರುತ್ತಿದೆ.
ನೆರೆಯ ಆರ್ಭಟದಿಂದ ನಾವುಂದ ಮತ್ತು ನಾಡ ಕುದ್ರುವಿನಲ್ಲಿಯೂ ನೆರೆ ಆವರಿಸಿದ್ದು, ಇಲ್ಲಿನ ಹಲವಾರು ಮನೆಯವರು ಆತಂಕದಲ್ಲೇ ದಿನಕಳೆಯುವಂತಾಗಿದೆ. ಕುದ್ರುವಿನ ಸುತ್ತಲೂ ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದೆ. ವರ್ಷವಿಡೀ ದೋಣಿಯನ್ನೇ ಆಶ್ರಯಿ ಸಿರುವ ಇಲ್ಲಿನ ನಿವಾಸಿಗಳು ಈ ಬಾರಿ ಬಹುಪ್ರಮಾಣದ ನೆರೆಯಿಂದಾಗಿ ದೋಣಿಯಲ್ಲೂ ಸಂಚರಿಸಲು ಅಸಾಧ್ಯವಾಗಿದೆ. ಪ್ರತಿವರ್ಷ ನೆರೆ ಬಂದಾಗ ಮಣ್ಣು ಕೊಚ್ಚಿ ಹೋಗುತ್ತಿದ್ದು, ನದಿ ದಡದಲ್ಲಿ ತಡೆಗೋಡೆಯೂ ಇಲ್ಲದೆ ಇರುವುದರಿಂದ ವರ್ಷದಿಂದ ವರ್ಷಕ್ಕೆ ನದಿ ಕೊರೆತವೂ ಜಾಸ್ತಿಯಾಗುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯ ತಿಳಿಸಿದ್ದಾರೆ. ನೆರೆ ಸಮಸ್ಯೆ ಇರುವ ಹಲವೆಡೆ ಬಾವಿಗೆ ಮಳೆ ನೀರು ನುಗ್ಗಿದ ಕಾರಣ ಕುಡಿಯುವ ನೀರಿಗೆ ಜನರು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ವಿಷ ಜಂತುಗಳು, ಸೊಳ್ಳೆ ಕಾಟದಿಂದ ಸ್ಥಳೀಯರು ಭೀತಿಗೊಂಡಿದ್ದಾರೆ.
ನೆರೆ ಪಿಡಿತ ಮತ್ತು ಕಡಲ ಕೊರೆತ ಪ್ರದೇಶವನ್ನು ಡ್ರೋನ್ ಮೂಲಕ ಸ್ಥಳೀಯ ಸುದ್ದಿವಾಹಿನಿ ತಂಡ ಸೆರೆ ಹಿಡಿದಿದ್ದು ನೆರೆ ಪೀಡಿತ ಪ್ರದೇಶದ ದೃಶ್ಯ ಸೆರೆಯಾಗಿದೆ. ಪ್ರಸ್ತುತ ನೆರೆ ಇಳಿಮುಖಗೊಂಡಂತೆ ಗೋಚರಿಸಿದರೂ ಕೂಡ ಮಲೆನಾಡು, ಘಾಟಿ ಪ್ರದೇಶದಲ್ಲಿ ಮಳೆಯಾದಲ್ಲಿ ಮತ್ತೆ ನೆರೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Comments are closed.