ಕುಂದಾಪುರ: ರೈಲ್ವೆ ಸೇವೆಗಳಿಂದ ಸಾಮಾನ್ಯ ಜನರಿಗೆ ಹೆಚ್ಚು ಅನುಕೂಲ. ರೈಲ್ವೆ ಸೇವೆಗಳು ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅನುಕೂಲವಾಗುವ ಸಲಹೆ ಸಿಕ್ಕಿದಾಗ ಜನಪ್ರತಿನಿಧಿಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮಂಗಳೂರಿನಿಂದ ಮುಂಬೈಗೆ ವಂದೇ ಭಾರತ್ ರೈಲು ಸೇವೆ ಒದಗಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಿದರೆ ಡಬ್ಲಿಂಗ್, ಸುಸಜ್ಜಿತ ರೈಲು ನಿಲ್ದಾಣ ಸಹಿತ ಎಲ್ಲಾ ವ್ಯವಸ್ಥೆಗಳನ್ನು ನೀಡಲು ಸಾಧ್ಯವಾಗುತ್ತದೆ. ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಪಾಲು ಕೊಂಕಣ ರೈಲ್ವೆಯಲ್ಲಿ ಇದ್ದು ಮಹಾರಾಷ್ಟ್ರ, ಕೇರಳ ಮತ್ತು ಗೋವಾ ರಾಜ್ಯಗಳು ಒಪ್ಪಿಗೆ ಸೂಚಿಸಿದ್ದು, ರಾಜ್ಯ ಸರಕಾರ ಕೂಡ ಸಮ್ಮತಿ ಸೂಚಿಸಿದೆ. ಬೆಂಗಳೂರಿಗೆ ಹೆಚ್ಚುವರಿ ರೈಲನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ಪ್ರಯಾಣಿಕರ ದಟ್ಟಣೆಯನ್ನು ನೀಗಿಸಲು ಪಂಚಗಂಗಾವಳಿ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಲಯನ್ಸ್ ಕ್ಲಬ್ ಹಂಗಳೂರು ಇವರ ವತಿಯಿಂದ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡ ಕುಂದಾಪುರ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್, ನೂತನ ಮೇಲ್ಛಾವಣಿ ಹಾಗೂ ಗಾರ್ಡ್‍ನ್ ಸುಂದರೀಕರಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಇಷ್ಟು ದೊಡ್ಡದ ಕೊಡುಗೆಯನ್ನು ನೀಡಿದ ಲಯನ್ಸ್ ಕ್ಲಬ್ ಕಾರ್ಯ ಶ್ಲಾಘನೀಯ. ರೈಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ ಮಾಡಿದ ಕಾಮಾಗಾರಿಯಿಂದ ಪ್ರಯಾಣಿಕರಿಗೆ ಹೆಚ್ಚಿನ ಸೇವೆ ದೊರಕಿದೆ. ಒಳ್ಳೆಯ ಕೆಲಸಕ್ಕೆ ಅನುದಾನ ವಿನಿಯೋಗಿಸಿದ್ದಕ್ಕಾಗಿ ಕೇಂದ್ರ ಸರಕಾರದ ಪರವಾಗಿ ಅಭಿನಂದನೆ ಸಲ್ಲಿಸಿದರು. ಮಳೆಗಾಲ ಮತ್ತು ಬೇಸಿಗೆಯಲ್ಲಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳನ್ನು ಮನಗಂಡು ಲಯನ್ಸ್ ಕ್ಲಬ್ ಹಂಗಳೂರು ಕೊಂಕಣ ರೈಲ್ವೆಯೊಂದಿಗೆ ಸಮನ್ವತೆ ಸಾಧಿಸಿಕೊಂಡು ರೈಲ್ವೆ ಇಲಾಖೆಯ ಮಾರ್ಗಸೂಚಿಯಂತೆ ಫ್ಲಾಟ್ ಫಾರ್ಮ್ ನವೀಕರಣ ಹಾಗೂ ಸುಸಜ್ಜಿತ ನೂತನ ಮೇಲ್ಛಾವಣಿಯನ್ನು ನಿರ್ಮಾಣ ಮಾಡಿರುವ ಕಾರ್ಯ ಸಾರ್ಥಕವಾಗಿದೆ. ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಇನ್ನಷ್ಟು ಅಭಿವೃದ್ಧಿ ಪೂರಕ ಕಾರ್ಯಕ್ರಮಗಳು ನಡೆಯಲಿ ಎಂದು ಅವರು ಹೇಳಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡುವ ಸಂಬಂಧ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ವಿಧಾನಸಭೆಯಲ್ಲಿ ಕೂಡ ಎಲ್ಲಾ ಶಾಸಕರು ಒಟ್ಟಾಗಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಕುಂದಾಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಲಯನ್ಸ್ ಕ್ಲಬ್ ಹಂಗಳೂರು ಇವರು ಕುಂದಾಪುರ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಹಾಗೂ 60 ಲಕ್ಷ ರೂ.ಗಳನ್ನು ಅಭಿವೃದ್ಧಿಗಾಗಿ ವಿನಿಯೋಗಿಸಿರುವುದು ಶ್ಲಾಘನೀಯ ಎಂದರು ಹೇಳಿದರು.
ಸನ್ಮಾನ: ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ರೋವನ್ ಡಿ’ಕೋಸ್ತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ವಿಶೇಷ ದೇಣಿಗೆ ನೀಡಿದ ಎಂ.ಮಹೇಶ ಹೆಗ್ಡೆ, ಗಣೇಶ ರಾವ್, ಮಹೇಂದ್ರ ಶೆಟ್ಟಿ, ಹಂಸರಾಜ ಶೆಟ್ಟಿ, ಹರಿಪ್ರಸಾದ ರೈ, ಜೋನ್ಸನ್ ಡಿ’ಅಲ್ಮೇಡಾ, ಕೆ.ಬಾಲಚಂದ್ರ ಶೆಟ್ಟಿ, ಅರುಣ್ ಕುಮಾರ್ ಹೆಗ್ಡೆ, ಫಿಲಿಪ್ ಡಿ’ಕೋಸ್ತ, ರವಿಕಿರಣ್ ಡಿ’ಕೋಸ್ತ, ರಜತ್ ಕುಮಾರ್ ಹೆಗ್ಡೆ ಅವರನ್ನು ಗೌರವಿಸಲಾಯಿತು. ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ರೋವನ್ ಡಿ’ಕೋಸ್ತಾ ಅವರನ್ನು ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣ ಸಮಿತಿ ವತಿಯಿಂದ ಗೌರವಿಸಲಾಯಿತು.
ಲಯನ್ಸ್ ಜಿಲ್ಲಾ ರಾಜ್ಯಪಾಲ ಮಹಮ್ಮದ್ ಹನೀಫ್, ಕೊಂಕಣ ರೈಲ್ವೆ ಸಲಹಾ ಸಮಿತಿ ಸದಸ್ಯ ಗಣೇಶ್ ಪುತ್ರನ್, ಲಯನ್ಸ್ ಜಿಲ್ಲಾ ಪ್ರಥಮ ಉಪ ರಾಜ್ಯಪಾಲೆ ಸಪ್ನಾ ಸುರೇಶ, ಜಿಲ್ಲಾ ದ್ವಿತೀಯ ಉಪ ರಾಜ್ಯಪಾಲ ರಾಜೀವ ಕೋಟ್ಯಾನ್, ಜಿಲ್ಲಾ ದ್ವಿತೀಯ ಉಪ ರಾಜ್ಯಪಾಲ ಎಲೆಕ್ಟ್ ಹರಿಪ್ರಸಾದ್ ರೈ, ಲಯನ್ಸ್ ಜಿಲ್ಲಾ ಅಂಬಾಸಿಡರ್ ಬಿ.ಅರುಣ್ ಕುಮಾರ್ ಹೆಗ್ಡೆ, ರಿಜನ್ ಛೇರ್ಮನ್ ಬಿ.ಸೋಮನಾಥ ಹೆಗ್ಡೆ, ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನುಪಮಾ ಶೆಟ್ಟಿ, ಹಂಗಳೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಮ್ಯಾಥ್ಯೂ ಜೋಸೆಫ್, ಕೋಶಾಧಿಕಾರಿ ಪುನೀತ್ ಶೆಟ್ಟಿ ಉಪಸ್ಥಿತರಿದ್ದರು.
ರೋವನ್ ಡಿ’ಕೋಸ್ತ ಸ್ವಾಗತಿಸಿದರು. ಜೋನ್ ಛೇರ್ಮನ್ ಎಚ್.ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರೇಟ್ಟಾ ಡಿ’ಕೋಸ್ತ ಕಾರ್ಯಕ್ರಮ ನಿರೂಪಿಸಿದರು.
Comments are closed.