ಮಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಕರಾವಳಿ ಭಾಗದಲ್ಲಿ ನೂತನವಾಗಿ ಆರಂಭಿಸಿರುವ ‘ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ’ಯನ್ನು ಮಂಗಳೂರು ನಗರದಲ್ಲಿ ಇಂದು (ಜೂ.13 ಶುಕ್ರವಾರ) ರಾಜ್ಯ ಗೃಹಸಚಿವ ಡಾ. ಜಿ. ಪರಮೇಶ್ವರ್ ಉದ್ಘಾಟಿಸಿದರು.
ಈ ವೇಳೆ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆಯ ಲಾಂಛನ ಹಾಗೂ ಮಾಹಿತಿಯ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಕೋಮು ಗಲಭೆ, ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಮತೀಯವಾದಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆಯು ನಿರ್ವಹಿಸಲಿದೆ. ಕರಾವಳಿ ಭಾಗದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಗೃಹಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವಾನ್ ಡಿ.ಸೋಜಾ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಎಡಿಜಿಪಿ ಮುರಗನ್, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ನಗರ ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರು ಉಪಸ್ಥಿತರಿದ್ದರು.
ಕರಾವಳಿ ಭಾಗದಲ್ಲಿ ಕೋಮು ಗಲಭೆ, ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಮತೀಯವಾದಿಗಳನ್ನು ಮಟ್ಟ ಹಾಕಲಾಗುವುದು. ವಿಶೇಷವಾಗಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಈ ಪಡೆ ಕಾರ್ಯನಿರ್ವಹಿಸಲಿದೆ. -ದಿನೇಶ್ ಗುಂಡೂರಾವ್ (ದ.ಕ ಜಿಲ್ಲಾ ಉಸ್ತುವಾರಿ ಸಚಿವ)

Comments are closed.