ಕರಾವಳಿ

ಕುಂದಾಪುರ | ಕೊಲೆಯತ್ನ, ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಮತ್ತು ಕೊಲ್ಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಎರಡು ಪ್ರಕರಣಗಳಲ್ಲೂ ಆರೋಪಿಗಳಾದ ಇಡೂರು-ಕುಂಜ್ಞಾಡಿ ಗ್ರಾಮದ ಕಾರ್ತಿಕ್ ಆಚಾರಿ(24), ವಿಷ್ಣು ಶೆಟ್ಟಿ(26) ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾ ಪ್ರಕರಣದ ಆರೋಪಿ ಆಲೂರು ಗ್ರಾಮದ ಪ್ರದೀಪ ಪೂಜಾರಿ(28) ಎಂಬವರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆಲೂರು -ಕುಂದಾಪುರ ಮಾರ್ಗದಲ್ಲಿ ಸಂಚರಿಸುವ ಜಯದುರ್ಗಾ ಬಸ್‌ಗೆ ಆಲೂರು ಗ್ರಾಮದ ಹೊಯಿಗೆಹರ ಬಸ್‌ ನಿಲ್ದಾಣದಲ್ಲಿ ಜೂ.2ರಂದು ಹತ್ತಿದ ಪ್ರದೀಪ್‌ ಮತ್ತು ಇತರರು, ನಿರ್ವಾಹಕ ಗಣೇಶ್ ಅವರ ಶರ್ಟ್ ಕಾಲರ್ ಪಟ್ಟಿಯನ್ನು ಹಿಡಿದು, ಕೈಯಿಂದ ಹೊಡೆದು ರಕ್ತಗಾಯ ಉಂಟಾಗುವಂತೆ ಮಾಡಿದ್ದಾರೆ. ಅಲ್ಲದೆ ಗಣೇಶ್ ಅವರ ಎದೆಗೆ ಕಾಲಿನಿಂದ ತುಳಿದು, ಅವರ ಕೈಯಲ್ಲಿದ್ದ ಬ್ಯಾಗ್‌ನಿಂದ ಸುಮಾರು 15,700 ರೂ. ಹಣವನ್ನು ಕಸಿದುಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜೂ.2ರಂದು ರಾತ್ರಿ ಸುಧೀರ್ ಕೆಲಸ ಮುಗಿಸಿಕೊಂಡು ಇಡೂರು ಕುಂಜ್ಞಾಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ಸಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಕಾರ್ತಿಕ್, ವಿಷ್ಣು ಹಾಗೂ ರಕ್ಷಿತ್ ಎಂಬವರು ಸುಧೀರ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೆನ್ನೆಗೆ ಹೊಡೆದು, ಕುತ್ತಿಗೆಯನ್ನು ಒತ್ತಿ ಹಿಡಿದು ಕೊಲ್ಲಲು ಪ್ರಯತ್ನಿಸಿರು ವುದಾಗಿ ದೂರಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.