ಕರಾವಳಿ

ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿ ರೈತ ಮಿತ್ರರಾಗಿ ಕೆಲಸ ಮಾಡಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ | ಕೋಟೇಶ್ವರದಲ್ಲಿ ‘ರೈತ ಸಂಪರ್ಕ ಕೇಂದ್ರ’ ಉದ್ಘಾಟನೆ

Pinterest LinkedIn Tumblr

ಕುಂದಾಪುರ: ರೈತ ಸಂಪರ್ಕ ಕೇಂದ್ರಗಳು ರೈತರಿಗೆ ಅನುಕೂಲವಾಗಿದೆ. ಕೃಷಿ ವಿಚಾರದಲ್ಲಿ ಅಧಿಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆ ನೀಡಬೇಕು. ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕು. ರೈತರು ಹಾಗೂ ಸರ್ಕಾರದ ಮಧ್ಯೆ ಕೊಂಡಿಯಾಗಿ ಅಧಿಕಾರಿ, ಸಿಬ್ಬಂದಿಗಳು ರೈತರ ಮಿತ್ರರಾಗಿ ಕೆಲಸ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ ಕೋಟೇಶ್ವರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕುಂದಾಪುರ ರೈತ ಸಂಪರ್ಕ ಕೇಂದ್ರ (ಕೋಟೇಶ್ವರ)ವನ್ನು ಉದ್ಘಾಟಿಸಿ‌ ಅವರು ಮಾತನಾಡಿದರು.

ರೈತರು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಹೆಚ್ಚು ಆದಾಯ ಗಳಿಸುವಂತಾಬೇಕು. ಕೃಷಿಯಲ್ಲಿ ಆಧುನಿಕರಣ ಕಂಡುಕೊಳ್ಳಬೇಕು, ರೈತರು ಸುಖಿಯಾಗಿದ್ದಾಗ ಮಾತ್ರ ದೇಶ ಅಭಿವೃದ್ಧಿಯಾದಂತೆ. ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ರೈತರ ಪರವಾಗಿದೆ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ರೈತರ ಕೃಷಿ ಚಟುವಟಿಕೆ ನಿರಂತರವಾಗಿರುತ್ತದೆ. ಕೃಷಿ ಚಟುವಟಿಕೆ, ಕೃಷಿ ಸಲಕರಣೆಗಳು, ಸಬ್ಸಿಡಿ ಸಿಗುವ ಬಗ್ಗೆ ರೈತರಿಗೆ ಮಾಹಿತಿ ಸಿಗುವಂತಾಗಬೇಕು. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಫಲಕ ಅಳವಡಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಭಾರತ ಕೃಷಿ ಪ್ರಧಾನವಾದ ದೇಶ, ಭಾರತದ ದೇಶ ಹಳ್ಳಿಗಳ ದೇಶ, ರೈತರ ದೇಶ, ನಮಗೆ ಕೃಷಿಯೇ ಪ್ರಧಾನವಾಗಿದೆ. ಅದಕ್ಕಾಗಿಯೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈಜವಾನ್ ಜೈ ಕಿಶಾನ್ ಅಂತ ಕರೆಕೊಟ್ಟಿದ್ದರು.ರೈತ ಸುಮ್ಮನೆ ಕುಳಿತರೆ ನಾವೆಲ್ಲರೂ ಉಪವಾಸ ಕೂರಬೇಕಾಗುತ್ತದೆ. ಬ್ರಿಟಿಷರು ಸ್ವತಂತ್ರ ಕೊಟ್ಟು ಹೋಗುವಾಗ ನಮ್ಮ ಕೃಷಿಗೆ ಪೆಟ್ಟು ನೀಡಿಯೇ  ಹೋದರು. ಭಾರತ ಮುಂಚೂಣಿಗೆ ಬರಬಾರದು ಅಂತ ಕೃಷಿ ಉತ್ಪನ್ನಗಳಿಗೆ ರಾಸಾಯನಿಕ ಬೆರಸಿಹೋಗಿದ್ದರು. ಆದರೆ,  ನಮಗೆ ಕೃಷಿಯೇ ಪ್ರಧಾನವಾಗಿದೆ. ಕೃಷಿಯಿಂದಲೇ ನಾವು ವಿಶ್ವಗುರುವಿನ ಪಟ್ಟದತ್ತ ನಡೆಯುತ್ತಿದ್ದೇವೆ ಎಂದು ತಿಳಿಸಿದರು.

ಕುಂದಾಪುರ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರೈತ ಸಂಪರ್ಕ ಕೇಂದ್ರದಿಂದ ರೈತರು ಉಪಯೋಗ ಪಡೆದುಕೊಳ್ಳಬೇಕು. ಭತ್ತದ ಕೃಷಿಗೆ ಹೆಚ್ಚಿನ ಬೆಂಬಲ ಬೆಲೆ ಸಿಗದ ಕಾರಣ ಉಡುಪಿ ಜಿಲ್ಲೆಯ ವಿವಿದೆಡೆ ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ರೈತರಿಗೆ ಅಗತ್ಯ ಬಿತ್ತನೆ ಬೀಜ ಪೂರೈಸಬೇಕು. ರಾಜ್ಯ-ಕೇಂದ್ರ ಸರಕಾರದ ಯೋಜನೆಗಳ ಮಾಹಿತಿಗಳು ಅರ್ಹ ರೈತರಿಗೆ ನೀಡುವ ಕೆಲಸವನ್ನು ಅಧಿಕಾರಿ, ಸಿಬ್ಬಂದಿಗಳು ಮಾಡಬೇಕು. ಹಾಗೆಯೇ ಕರಾವಳಿ ಭಾಗದ ಎಲ್ಲಾ ನದಿಗಳು ಸಮ ಮಟ್ಟದಲ್ಲಿದ್ದು ಹೂಳು ತೆಗೆಯುವ ಕಾರ್ಯಕ್ಕೆ ವೇಗ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಬೇಕು ಎಂದರು.

ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್., ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ಆಶಾ, ಕೃಷಿ ಇಲಾಖೆಯ ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜೆ.ಸಿ., ಉಪ ಕೃಷಿ ನಿರ್ದೇಶಕ ಚಂದ್ರಶೇಖರ್ ನಾಯ್ಕ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ,  ಜಯರತ್ನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದಿನೇಶ್ ಹೆಗ್ಡೆ ಮೊಳಹಳ್ಳಿ, ಜಿಲ್ಲಾ ಕೆಡಿಪಿ ಸದಸ್ಯರಾದ ಪ್ರಸನ್ನ ಕುಮಾರ್ ಶೆಟ್ಟಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ, ಮುಖಂಡರಾದ ಶಿವರಾಮ ಶೆಟ್ಟಿ ಮಲ್ಯಾಡಿ, ವಿಕಾಸ್ ಹೆಗ್ಡೆ ಇದ್ದರು.

ಕುಂದಾಪುರ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೂಪಾ ಜೆ. ಮಾಡ ಸ್ವಾಗತಿಸಿದರು. ಸುಪ್ರಿತಾ ಪ್ರಾರ್ಥಿಸಿ, ಶಿಕ್ಷಕ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ನಿರೂಪಿಸಿದರು. ಕುಂದಾಪುರ ಕೃಷಿ ಅಧಿಕಾರಿ ಗಾಯತ್ರಿ ದೇವಿ ವಂದಿಸಿದರು.

 

Comments are closed.