ಕರ್ನಾಟಕ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗನ್ನು ಮತ್ತೆ 5 ದಿನ ಪೊಲೀಸ್ ವಶಕ್ಕೆ ನೀಡಿದ ಕೋರ್ಟ್

Pinterest LinkedIn Tumblr

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಹೆಚ್ಚಿನ ವಿಚಾರಣೆಗಾಗಿ ಶನಿವಾರ ಮತ್ತೆ ಐದು ದಿನ ಪೊಲೀಸರ ವಶಕ್ಕೆ ನೀಡಿದೆ.

ದರ್ಶನ್ ಹಾಗೂ ಇತರೆ ಆರೋಪಿಗಳ ಆರು ದಿನಗಳ ಪೊಲೀಸ್ ಕಸ್ಟಡಿ ಅವಧಿ ಭಾನುವಾರಕ್ಕೆ ಕೊನೆಗೊಳ್ಳಲಿದೆ. ಆದರೆ ನಾಳೆ ಭಾನುವಾರವಾಗಿರುವುದರಿಂದ ನ್ಯಾಯಾಲಯಕ್ಕೆ ರಜೆ ಹಿನ್ನೆಲೆ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಪೊಲೀಸರು ಇಂದೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮತ್ತೆ 9 ದಿನ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು.

ಆರೋಪಿಗಳ ವಿಚಾರಣೆ ನಡೆಸಿದ ಕೋರ್ಟ್, ಪೊಲೀಸ್ ಕಸ್ಟಡಿಯ ಅವಧಿಯನ್ನು ಐದು ದಿನಗಳ ಕಾಲ ವಿಸ್ತರಿಸಿ ಆದೇಶಿಸಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ, ನಟಿ ಪವಿತ್ರಾ ಗೌಡ ಸೇರಿದಂತೆ 11 ಆರೋಪಿಗಳನ್ನು ಮಂಗಳವಾರ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಒಟ್ಟು 19 ಆರೋಪಿಗಳಿದ್ದು, ಇತರೆ ಕೆಲವು ಆರೋಪಿಗಳನ್ನು ನಂತರದ ದಿನಗಳಲ್ಲಿ ಬಂಧಿಸಲಾಗಿದ್ದು, ಕೆಲವು ಆರೋಪಿಗಳು ತಾವೇ ಪೊಲೀಸರ ಮುಂದೆ ಶರಣಾಗಿದ್ದರು.

ಬಂಧಿತ ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರಿಂದ ಮತ್ತು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಹಾಕಿದ್ದರಿಂದ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದ್ದಾಗಿ ಪೊಲೀಸರು ತಿಳಿಸಿದ್ದಾರೆ

Comments are closed.