ಕರಾವಳಿ

ಉತ್ತರಾಖಂಡ ದುರ್ಘಟನೆ; ಕುಂದಾಪುರದ‌ ಕುಂಭಾಶಿ ಮೂಲದ ಚಾರಣಿಗ ಪದ್ಮನಾಭ ಭಟ್ ದುರ್ಮರಣ

Pinterest LinkedIn Tumblr

ಕುಂದಾಪುರ:  ಉತ್ತರಾಖಂಡ ರಾಜ್ಯಕ್ಕೆ ಟ್ರಕ್ಕಿಂಗ್ ಗೆ ಹೋಗಿ ದುರ್ಮರಣಕ್ಕೀಡಾದ 9 ಜನರ ಪೈಕಿ ಓರ್ವರಾದ ಪದ್ಮನಾಭ ಭಟ್ ಮೂಲತಃ ಕುಂದಾಪುರ ತಾಲೂಕು ಕುಂಭಾಶಿಯವರು. ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ದುಃಖದ ವಾತಾವರಣ ಸೃಷ್ಟಿಯಾಗಿತ್ತು.

ಕುಂಭಾಶಿಯ ಕೊರವಡಿ ರಸ್ತೆಯಲ್ಲಿರುವ ಶ್ರೀ ಹರಿಹರ ನಿಲಯವು ಮೃತ ಪದ್ಮನಾಭ ಭಟ್ಟರ ಹಿರಿಯರ ಮೂಲ ಮನೆ. ಪ್ರಸ್ತುತ ಇಲ್ಲಿ ಚಿಕ್ಕಪ್ಪನ ಕುಟುಂಬದವರು ವಾಸ್ತವಿಸಿದ್ದಾರೆ.

ಕೃಷ್ಣಮೂರ್ತಿ ಭಟ್ -ಸತ್ಯವತಿ ದಂಪತಿಯ ಪುತ್ರ ಪದ್ಮನಾಭ ಭಟ್. ಇವರಿಗೆ ಇಬ್ಬರು ಅಕ್ಕಂದಿರು, ಇಬ್ಬರು ತಂಗಿಯರಿದ್ದಾರೆ. ಕೃಷ್ಣಮೂರ್ತಿ ಭಟ್ಟರು ಬೆಂಗಳೂರಿನಲ್ಲೇ ವ್ಯವಹಾರ ನಡೆಸಿಕೊಂಡು ಅಲ್ಲೇ ನೆಲೆಸಿದ್ದರು. ಅಂತೆಯೇ ಪದ್ಮನಾಭ ಭಟ್ಟರ ಹುಟ್ಟು, ಬಾಲ್ಯ, ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲೇ ನಡೆಯಿತು. ವಿವಾಹಿತರಾಗಿ ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿರುವ ಪದ್ಮನಾಭರಿಗೆ ಪ್ರವಾಸ, ಟ್ರಕ್ಕಿಂಗ್ ಇತ್ಯಾದಿಗಳಲ್ಲಿ ಆಸಕ್ತಿ ಜಾಸ್ತಿ. ಆಗಾಗ ಸಹೋದ್ಯೋಗಿಗಳು, ಸ್ನೇಹಿತರೊಡನೆ ದೂರದ ರಮಣೀಯ ಸ್ಥಳಗಳಿಗೆ ಪ್ರವಾಸ ಹೋಗುತ್ತಿರುತ್ತಾರೆ.

ಹಾಗೆಯೇ, ಮೇ 29 ರಂದು 22 ಜನರ ತಂಡದೊಂದಿಗೆ ಉತ್ತರಾಖಂಡ ರಾಜ್ಯದ ಉತ್ತರ ಕಾಶಿ ಎಂದು ಕರೆಯಲಾಗುವ ಬೆಟ್ಟ ಪ್ರದೇಶಕ್ಕೆ ಟ್ರಕ್ಕಿಂಗ್ ಹೋಗಿದ್ದರು. ಪ್ರವಾಸ ಮುಗಿಸಿ ಹುಲ್ಲುಗಾವಲಿನಂತ ಬೆಟ್ಟ ಪ್ರದೇಶದಿಂದ ಜೂನ್ 4 ರಂದು ಎಲ್ಲರೂ ಕೆಳಗಿಳಿಯುತ್ತಿದ್ದರು. 22 ಜನರ ತಂಡದಲ್ಲಿ ಒಂದಷ್ಟು ಜನ ಚಿಕ್ಕ ತಂಡವಾಗಿ ಕೆಳಗೆ ಇಳಿಯುತ್ತಿದ್ದರು. ಪದ್ಮನಾಭ ಸೇರಿದಂತೆ ಒಂಭತ್ತು ಜನರ ತಂಡ ಸುಮಾರು 15 ಸಾವಿರ ಅಡಿ ಎತ್ತರದಿಂದ ಕೆಳಗೆ ಇಳಿಯುತ್ತಿರುವಾಗ ಈ ದುರ್ಘಟನೆ ನಡೆದಿದೆ.

Comments are closed.