ಕರಾವಳಿ

ಹೆಂಗವಳ್ಳಿಯ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ 10 ವರ್ಷದ ಬಾಲಕ ಮೃತ್ಯು

Pinterest LinkedIn Tumblr

ಕುಂದಾಪುರ: ರಜೆಯ ಹಿನ್ನೆಲೆ ಕುಟುಂಬ ಸದಸ್ಯರೊಂದಿಗೆ ತಾಲೂಕಿನ ಹೆಂಗವಳ್ಳಿಯ ರೆಸಾರ್ಟ್‌ಗೆ ಹೋಗಿದ್ದ ಬಾಲಕ ಈಜು ಕೊಳದಲ್ಲಿ ಇಳಿದಾಗ ಮುಳುಗಿ ಪ್ರಾಣ ಕಳೆದುಕೊಂಡ ಘಟನೆ ಏಪ್ರಿಲ್ 11 ರಂದು ಮಧ್ಯಾಹ್ನ ನಡೆದಿದೆ.

ಹೂಡೆಯ ಆರಿಝ್ ಉಮ್ಮರ್ ಸೌಕುರ್(10) ಮೃತ ಬಾಲಕ. ಹೂಡೆಯ ಇಬಾದುಲ್ಲ ಅವರು ಕುಟುಂಬ ಸಮೇತರಾಗಿ ರೆಸಾರ್ಟ್ ಗೆ ಹೋಗಿದ್ದು, ಆರಿಝ್ ಮಕ್ಕಳೊಂದಿಗೆ ಆಟ ಆಡುತ್ತ ನೀರಿನಲ್ಲಿ ಬಿದ್ದಿದ್ದಾನೆ. ಈಜು ಕೊಳ ಮತ್ತು ಸುತ್ತಮುತ್ತಲೂ ಹತ್ತಾರು ಜನರಿದ್ದರೂ ಎಲ್ಲರೂ ಸಂಭ್ರಮಿಸುತ್ತಿದ್ದ ಕಾರಣ ಆತನನ್ನು ರಕ್ಷಿಸುವುದು ಸಾಧ್ಯವಾಗಿಲ್ಲ ಎನ್ನಲಾಗಿದೆ. ಒಂದಷ್ಟು ಸಮಯದ ಬಳಿಕ ಬಾಲಕ ಮುಳುಗಿದ್ದು ಗಮನಕ್ಕೆ ಬಂದಿದ್ದು ಆತನನ್ನು ಸ್ಥಳದಲ್ಲಿದ್ದವರು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ, ಹಾಲಾಡಿಯ ಆಸ್ಪತ್ರೆಗೆ ಬಂದು ಪರಿಶೀಲಿಸಿದಾಗ ವೈದ್ಯರು ಆರಿಝ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಬಾಲಕನ ಸಾವಿಗೆ ರೆಸಾರ್ಟ್ ಅವರ ನಿರ್ಲಕ್ಷ್ಯ ಹಾಗೂ ಅಜಾಗರೂಕತೆ, ಲೈಫ್ ಜಾಕೆಟ್ ಮತ್ತು ಲೈಫ್ ಗಾರ್ಡ್ ಹಾಗೂ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂದು ಆರೋಪ ಕೇಳಿ ಬಂದಿದ್ದು ಬಾಲಕನ ಪೋಷಕರು ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Comments are closed.