ಕರಾವಳಿ

ಕೆರಾಡಿ-ಬೆಳ್ಳಾಲ ಗ್ರಾ‌ಪಂ ವ್ಯಾಪ್ತಿಯ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ | ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು: ಗೀತಾ ಶಿವರಾಜಕುಮಾರ್

Pinterest LinkedIn Tumblr

ಕುಂದಾಪುರ: ವಿಧಾನಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಘೋಷಿಸಿದ ಪಂಚ ಗ್ಯಾರೆಂಟಿಗಳು ಯಾವುದೇ ಗೊಂದಲವಿಲ್ಲದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಸಂಸದೆಯಾಗಿ ಗೆದ್ದುಬಂದರೆ ಹಕ್ಕುಪತ್ರ, ಸಾಲಮನ್ನಾ, ಬೆಂಬಲ ಬೆಲೆ ಮೊದಲಾದ ಸಮಸ್ಯೆಗಳ ಪರಿಹಾರಕ್ಕೆ ಆಧ್ಯತೆಯ‌ ಮೇರೆಗೆ ಕ್ರಮವಹಿಸಲಾಗುತ್ತದೆ. ಸರ್ವರಿಗೆ ಸಮಪಾಲು-ಸಮಬಾಳು ಎಂಬಂತೆ ನಡೆದುಕೊಳ್ಳುವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾಶಿವರಾಜಕುಮಾರ್ ಹೇಳಿದರು.

ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯವರ ನಿವಾಸದಲ್ಲಿ ಶುಕ್ರವಾರ ಸಂಜೆ ನಡೆದ ಕೆರಾಡಿ-ಬೆಳ್ಳಾಲ ಗ್ರಾ‌ಪಂ ವ್ಯಾಪ್ತಿಯ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ನಟ ಶಿವರಾಜ್ ಕುಮಾರ್ ಮಾತನಾಡಿ, ಶಕ್ತಿಧಾಮವನ್ನು ಅಪ್ಪಾಜಿ-ಅಮ್ಮ 25 ವರ್ಷದ ಹಿಂದೆ ಸ್ಥಾಪಿಸಿದ್ದರು. 2008ರಿಂದ ಗೀತಾ ಅವರು ಅದನ್ನು ನೋಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಸೇವೆಯ ಗುಣ ಅವರ ತಂದೆ ಬಂಗಾರಪ್ಪ ಅವರ ರಕ್ತದಿಂದಲೇ ಗೀತಾಗೆ ಬಂದಿದೆ. ಮಹಿಳೆಯರಿಗೂ ಅವಕಾಶ ಕೊಟ್ಟಾಗಲೆ ಒಳ್ಳೆಯ ಆಡಳಿತ ನೀಡುತ್ತಾರೆ ಎಂಬುದು ತಿಳಿಯಲಿದೆ. ನಿಮ್ಮ ಪರವಾಗಿ ಹೋರಾಡಲು ಒಂದು ಅವಕಾಶ ಕೊಡಿ. ಪತ್ನಿ ಗೀತಾ ಒಳ್ಳೆಯ ಕೆಲಸ ಮಾಡುವ ಬಗ್ಗೆ ನಾನೇ ಗ್ಯಾರಂಟಿ. ಸಮಾಜಕ್ಕೆ ಒಳಿತು ಮಾಡುವ ಅವಕಾಶ ಕಳೆದುಕೊಳ್ಳಲು ಇಷ್ಟವಿಲ್ಲ. ಗೀತಾ ರನ್ನು ಗೆಲ್ಲಿಸಿ ಲೋಕಸಭೆಗೆ ಗೆಲ್ಲಿಸಿದರೆ ಅದರ ಸಂಪೂರ್ಣ ಕ್ರೆಡಿಟ್ ನಿಮ್ಮದೆ ಎಂದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಮಾತನಾಡಿ, ಬಡವರ ಮನೆಯಲ್ಲಿ ಹೆಣ್ಮಗಳ ಮದುವೆ ಮಾಡಲು‌ ಬಂಗಾರ ಕೊಳ್ಳಲು ಅಸಾಧ್ಯವಾಗಿದೆ. ಕಾಂಗ್ರೆಸ್ ಸರಕಾರವಿದ್ದಾಗ 22-25 ಸಾವಿರವಿದ್ದ ಚಿನ್ನದ ದರ 10 ವರ್ಷದಲ್ಲಿ 70 ಸಾವಿರಕ್ಕೂ ಅಧಿಕವಾಗಿದ್ದಕ್ಕೆ ಬಿಜೆಪಿ ಕಾರಣ. ಅಭಿವೃದ್ಧಿ ಚಿಂತನೆಯಿಂದ ಕೆಲಸ ಮಾಡಲು ಹೊರಟ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಬಹುಮತದೊಂದಿಗೆ ಆರಿಸಿ ಲೋಕಸಭೆಗೆ ಕಳಿಸಬೇಕು ಎಂದರು.

ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಶ್ರೀಮಂತರ ಉದ್ಧಾರದ ಯೋಜನೆ ನಮ್ಮ ಸರಕಾರದ್ದಲ್ಲ. ಬಡವರ ಶ್ರೇಯೋಭಿವೃದ್ಧಿಯೇ ನಮ್ಮ ಆದ್ಯತೆಯಾಗಿದೆ. ಸುಕುಮಾರ ಶೆಟ್ಟಿ ಯವರ ಜೊತೆಗೂಡಿ ಈ‌ಬಾರಿ ಚುನಾವಣೆಯಲ್ಲಿ ಕೆಲಸ ಮಾಡುವ ಮೂಲಕ ನಮ್ಮ ಅಭ್ಯರ್ಥಿ ಗೆಲ್ಲಿಸಲು ಪಣತೊಟ್ಟಿದ್ದೇವೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ ಬಾವಾ, ಶಿವಮೊಗ್ಗ ಲೋಕಸಭಾ ಚುನಾವಣಾ ಉಸ್ತುವಾರಿ ಅನಿಲ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಮುಖಂಡರಾದ ಎಸ್. ರಾಜು ಪೂಜಾರಿ, ಡಿ.ಆರ್ ರಾಜು ಕಾರ್ಕಳ, ನಾಗಪ್ಪ ಕೊಠಾರಿ, ಶೇಖರ್ ಶೆಟ್ಟಿ, ಬುಜಂಗ ಶೆಟ್ಟಿ, ಸತೀಶ ಶೆಟ್ಟಿ ಬೆಳ್ಳಾಲ, ಸಂಪಿಗೇಡಿ ಸಂಜೀವ ಶೆಟ್ಟಿ, ರೋಶನ್ ಕುಮಾರ್ ಶೆಟ್ಟಿ, ಮಂಜು ಕೊಠಾರಿ,ಕೆರಾಡಿ ಗ್ರಾ.ಪಂ ಉಪಾಧ್ಯಕ್ಷೆ ಕುಸುಮಾ, ಕರುಣಾಕರ ಶೆಟ್ಟಿ ಮೊದಲಾದವರು ಇದ್ದರು.

ಕಳೆದ 40 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು ಪ್ರತಿ ಚುನಾವಣೆಯಲ್ಲಿ ಇಲ್ಲಿ ಕೈ ಪರ ಮತ ಯಾಚನೆ ಮಾಡಿದ್ದೆ. 10 ವರ್ಷ ಬಿಜೆಪಿಯಲ್ಲಿದ್ದು ಜನ ಮೆಚ್ಚುವ ಕೆಲಸ ಮಾಡಿದ್ದೆ. ಬಿಜೆಪಿ ದೊಡ್ಡವರ ಪಕ್ಷ. ಪಾಪದವರಿಗೆ ಬಿಜೆಪಿಯಲ್ಲಿ ಬೆಲೆ ಇಲ್ಲ. ಕೋಟ್ಯಾಂತರ ರೂ. ಖರ್ಚು ಮಾಡಿದ ನನಗೆ ಬಿಜೆಪಿ ಟಿಕೆಟ್ ತಪ್ಪಿಸಲಾಯಿತು. 8 ತಿಂಗಳು ರಾಜಕೀಯದಿಂದ ದೂರವಿದ್ದೆ. ಮಧು ಬಂಗಾರಪ್ಪ ಪಕ್ಷಕ್ಕೆ ಆಹ್ವಾನ ನೀಡಿದ್ದು ನನ್ನ ಮಾತೃ ಪಕ್ಷವಾದ ಒರಿಜಿನಲ್ ಪಾರ್ಟಿ ಕಾಂಗ್ರೆಸ್ಸಿಗೆ ಬಂದೆ.‌ ಬಿಜೆಪಿಯಲ್ಲಿ ನನಗೆ, ಈಶ್ವರಪ್ಪ, ಸಿ.ಟಿ. ರವಿಯವರಿಗೆ ಬಿಜೆಪಿಯಿಂದ ಅನ್ಯಾಯವಾಗಿದೆ.
– ಬಿ.ಎಂ ಸುಕುಮಾರ ಶೆಟ್ಟಿ (ಮಾಜಿ ಶಾಸಕ)

Comments are closed.