ವಿಜಯಪುರ: ಬರೋಬ್ಬರಿ 20 ಗಂಟೆಗಳ ಕಾರ್ಯಾಚರಣೆ ನಡೆಸಿದ ನಂತರ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ ನನ್ನು ಸುರಕ್ಷಿತವಾಗಿ ಹೊರ ತಂದಿದ್ದು ಬಾಲಕನನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಮನೆ ಬಳಿ ಆಟವಾಡುತ್ತಿದ್ದ 2 ವರ್ಷದ ಮಗು ಸಾತ್ವಿಕ್ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ. ನಿನ್ನೆ ಸಂಜೆಯಿಂದ ಮಗುವಿನ ರಕ್ಷಣೆ ಕಾರ್ಯಾಚರಣೆ ನಡೆಸಿ ಅಂತಿಮವಾಗಿ ಮಗುವನ್ನು ಸುರಕ್ಷಿತವಾಗಿ ಹೊರತಂದಿದ್ದಾರೆ.
ಕೊಳವೆಬಾವಿಗೆ ಬಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಬಾಲಕನ ರಕ್ಷಣೆಗೆ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಅಗ್ನಿ ಶಾಮಕ ಮತ್ತು ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಬಾಲಕನ ಅಳುವುದು ಕೇಳಿಸಿತು. ಮಧ್ಯಾಹ್ನ 1.30ರ ಬಳಿಕ ಮಗುವನ್ನು ಜೀವಂತವಾಗಿ ಹೊರ ತೆಗೆಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ತಂದೆ-ತಾಯಿ ಸೇರಿ ಲಕ್ಷಾಂತರ ಜನರು ಸಲ್ಲಿಸಿದ ಪ್ರಾರ್ಥನೆ ಫಲಿಸಿದೆ.
ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ಬುಧವಾರ ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತು. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಸತತವಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾತ್ವಿಕ್ ಬದುಕಿ ಬರಲಿ ಎಂದು ಗ್ರಾಮದಲ್ಲಿ ಹಾಗೂ ಸುತ್ತಮುತ್ತ ಜನ ದೇವಾಲಯಗಳಲ್ಲಿ ವಿಶೇಷ ಪೂಜೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದರು. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ಗ್ರಾಮದ ಯುವಕರಿಂದ ವಿಶೇಷ ಪೂಜೆ ನಡೆದಿತ್ತು.
Comments are closed.