ಮಂಗಳೂರು: ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ ವಿದ್ಯಾರ್ಜನೆ ಮಾಡುವ ವೈಖರಿ ಶ್ರೇಷ್ಠವಾದುದು. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಮಿಂಚುತ್ತಿದ್ದಾರೆ. ಸಂಸ್ಥೆಯ ಗುರುಗಳ ನಿಸ್ವಾರ್ಥ ಸೇವೆಯಿಂದ ಗುರು-ಶಿಷ್ಯರ ನಂಟು ಬೆಳೆದಿದೆ ಎಂದು ಉದ್ಯಮಿ ಹರೀಶ್ ಶೇರಿಗಾರ್ ಹೇಳಿದರು.
ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಭಾನುವಾರ ಕಾಲೇಜು ವಠಾರದಲ್ಲಿ ಆಯೋಜಿಸಿದ ಗುರು-ಶಿಷ್ಯರ ಸಮ್ಮಿಲನ ‘ಗುರುಭ್ಯೋ ನಮಃ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಪರಸ್ಪರ ಸೇವಾ ಮನೋಭಾವ ಹೊಂದಿದ್ದಾರೆ. ಎಲ್ಲ ಅಂತರಗಳನ್ನು ಮೀರಿ ಬೆಳೆದಿದ್ದಾರೆ. ಇಲ್ಲಿನ ಗುರುಗಳು ಹಾಕಿಕೊಟ್ಟ ಹಾದಿ ಅವರ ಮಾರ್ಗದರ್ಶನ, ಶ್ರಮ ಹಾಗೂ ತ್ಯಾಗದಿಂದ ಇದು ಸಾಧ್ಯವಾಗಿದೆ ಎಂದರು.
ಹಿರಿಯ ವಿದ್ಯಾರ್ಥಿ, ಉದ್ಯಮಿ ಪ್ರಶಾಂತ್ ಸನಿಲ್ ಮಾತನಾಡಿ, ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಕಲಿತ ಒಳ್ಳೆಯ ಅಂಶಗಳಿಂದ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದಿರುವ ವಿದ್ಯಾರ್ಥಿಗಳನ್ನು ನೀಡಿರುವುದು ಸಂಸ್ಥೆಯ ಹೆಚ್ಚುಗಾರಿಕೆ ಎಂದು ಶ್ಲಾಘಿಸಿದರು.
ಕಾಲೇಜು ಸಂಚಾಲಕ ವಸಂತ ಕಾರಂದೂರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿವೃತ್ತ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಸಾಧನೆ ಮಾಡಿರುವ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜಯಶ್ರೀ ಸ್ವಾಗತಿಸಿದರು. ಪ್ರತೀಶ್ ಮತ್ತು ರಂಜಿತ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷ ಶೇಖರ ಪೂಜಾರಿ, ಡಾ.ಬಿ.ಜಿ.ಸುವರ್ಣ, ಪ್ರಾಂಶುಪಾಲೆ ಡಾ.ಆಶಾಲತಾ ಸುವರ್ಣ, ನಿವೃತ್ತ ಪ್ರಾಂಶುಪಾಲ ಶ್ರೀಧರ ಮಣಿಯಾಣಿ, ಚಂದನ್ ದಾಸ್, ಪ್ರಮುಖರಾದ ಹರೀಶ್, ಅಶೋಕ್ ಎಂ.ಕೆ ಉಪಸ್ಥಿತರಿದ್ದರು.
ಜನರ ಸಹಕಾರದಿಂದ ಸಂಸ್ಥೆ ಬೆಳೆದಿದೆ: ಹಿರಿಯ ಗುರು ಡಾ.ಆರ್. ನರಸಿಂಹಮೂರ್ತಿ ಮಾತನಾಡಿ, ಶಿಕ್ಷಣವೆಂಬುವುದು ಭಿನ್ನ ಅರ್ಥ ಪಡೆಯುತ್ತಿದೆ. ಗುರುವೆಂದರೆ ನಾಲ್ಕು ಗೋಡೆಯೊಳಗಿನ ಶಿಕ್ಷಕ ಮಾತ್ರವಾಗಿರದೆ, ವಿದ್ಯಾರ್ಥಿಗಳಿಗೆ ಕಲಿಸುವ ಜತೆಗೆ ವಿದ್ಯಾರ್ಥಿಗಳಿಂದ ಸ್ವತಃ ಕಲಿಯುತ್ತಾನೆ. ಈ ಸಂಸ್ಥೆ ಬೆಳೆಯಲು ಪರಿಸರದ ಜನರ ಸಹಕಾರ ಅದ್ಭುತ. ಸಂಸ್ಥೆ ಕಟ್ಟಿದ ಉದ್ದೇಶ ಸಹೃದಯಿಗಳಿಂದ ಇಂದು ಈಡೇರಿದೆ. ಜಾತಿ, ಮತ, ಧರ್ಮ, ಲಿಂಗ, ಭಾಷೆ ಎಲ್ಲವನ್ನು ಮೀರಿ ನಿಂತಾಗ ಮಾತ್ರವೇ ಸಾರ್ಥಕತೆ ಸಾಧ್ಯ ಎಂದು ಹೇಳಿದರು.
ಹಳೆಯ ನೆನಪುಗಳ ಮೆಲುಕು:
ಬೆಳಗ್ಗೆಯಿಂದ ಸಂಜೆ ತನಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ ಕಾರ್ಯಕ್ರಮ ಉದ್ಘಾಟನೆ ನಡೆದು ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿಗೆ ಸನ್ಮಾನ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ನಡೆಯಿತು. ಒಲಿಂಪಿಯನ್ ಸಹನಾ ಕುಮಾರಿ, ಕಬಡ್ಡಿ ಪಟು ಪುರುಷೋತ್ತಮ, ರಾಷ್ಟ್ರಮಟ್ಟದ ಸಾಧಕ ಕ್ರೀಡಾಪಟುಗಳಾದ ಮೋಹನ್, ಅವಿನಾಶ್ ಮೊದಲಾದವರ ಸಾಧನೆಯನ್ನು ಮೆಲುಕು ಹಾಕಲಾಯಿತು. ಮಧ್ಯಾಹ್ನ ಭೋಜನದ ಬಳಿಕ ಹಿರಿಯ ವಿದ್ಯಾರ್ಥಿಗಳು ಹಾಡು ಹಾಡಿ ರಂಜಿಸಿದರು. ಕೆಲವರು ನೃತ್ಯ ಪ್ರದರ್ಶಿಸಿ ಕಾಲೇಜಿನಲ್ಲಿ ತಾವು ಕಳೆದ ಹಳೆಯ ದಿನಗಳ ಮೆಲುಕು ಹಾಕಿಕೊಂಡರು.
Comments are closed.