ಕರಾವಳಿ

ಬರೆದಿಟ್ಟುಕೊಳ್ಳಿ…ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಗೆಲುವು ಖಚಿತ: ಮಧು ಬಂಗಾರಪ್ಪ

Pinterest LinkedIn Tumblr

ಕುಂದಾಪುರ: ಯಾರು ಏನೇ ಮಾಡಿದರೂ, ತಿಪ್ಪರಲಾಗ ಹೊಡೆದರೂ, ಹಣದ ಹೊಳೆ ಹರಿಸಿದರೂ ಕೂಡ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಗೆಲುವು ಖಚಿತ. ಅವರು ಸಂಸದರಾಗಿ ಜನರಿಗೆ ಸ್ಪಂದಿಸಲು ಉತ್ಸುಹುಕರಾಗಿದ್ದಾರೆ ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಮಂಗಳವಾರ ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಡಿಜಿಟಲ್ ಬ್ಯಾನರ್ ನಲ್ಲಿ ಸಾಧನೆ ಎಂಬುದು ನೋಡಿದ್ದು ಬಿಟ್ಟರೆ ನಿಜವಾದ ಕಾರ್ಯವಾಗಿಲ್ಲ. ಶಿವಮೊಗ್ಗದಲ್ಲಿ ನಡೆದ ಮೋದಿಯವರ ಸಭೆಯಲ್ಲಿ ಕೂಡ ಜಾತಿ-ಧರ್ಮದ ವಿಚಾರದಲ್ಲಿ ಮಾತನಾಡಿ ಮೋದಿಯವರ‌ ಮುಖ ನೋಡಿ ಮತ ನೀಡಿ ಎಂದು ಕೇಳಲಾಗಿದೆ ಹೊರತು ಅಭ್ಯರ್ಥಿಯು ತನ್ನ ಅಭಿವೃದ್ಧಿ ಕೆಲಸದ ವಿಚಾರದಲ್ಲಿ ಮತಯಾಚನೆ ಮಾಡಿಲ್ಲ. ಮಲೆನಾಡು ಭಾಗದ ಅತಿಕ್ರಮಣ, ಹಕ್ಕುಪತ್ರ ಸಮಸ್ಯೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಶರಾವತಿ ಸಂತ್ರಸ್ತರ ಬವಣೆ ನೀಗಿಸಿಲ್ಲ. ಪ್ರಚಾರ ತೆಗೆದುಕೊಳ್ಳುವುದು ಮಾತ್ರ ಸಾಧನೆಯಲ್ಲ ಎಂದು ವಾಗ್ದಾಳಿ ನಡೆಸಿದರು.

2009ರ ಚುನಾವಣೆಯಲ್ಲಿ ಬಿ.ಎಸ್ ಯಡಿಯೂರಪ್ಪ ಭ್ರಷ್ಟಾಚಾರದ ಹಣದಲ್ಲಿ ಬಂಗಾರಪ್ಪ ಅವರನ್ನು ಬಿ.ವೈ ರಾಘವೇಂದ್ರ ಸೋಲಿಸಿದ್ದಾರೆ ಎಂದು ಆರೋಪಿಸಿದ ಅವರು ರಾಘವೇಂದ್ರ ಅವರು ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ನಾನು ಈ‌ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದಾಗ ಜೆಡಿಎಸ್ ಪಕ್ಷಕ್ಕೆ ಮತ ಹಾಕುವುದು ಕಷ್ಟಕರವಾಗಿತ್ತು ಎಂಬುದು ಇಂದಿನ ಪರಿಸ್ಥಿತಿ ನೋಡಿದರೆ ತಿಳಿಯುತ್ತೆ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಎನ್ನುವುದು ಇದೀಗಾ ಸಾಭೀತಾಗಿ ಒರಿಜಿನಲ್ ಟೀಮ್ ಎಂಬುದಾಗಿದೆ ಎಂದು ಆರೋಪಿಸಿದರು.

ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಪಕ್ಷಾತೀತವಾಗಿ, ಜಾತಿ-ಧರ್ಮವಿಲ್ಲದೆ ಅನುಷ್ಠಾನ ಮಾಡಲಾಗಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಣಾಮಕಾರಿಯಾಗಿ ಬಡ ವರ್ಗದವರನ್ನು ತಲುಪಿದೆ. ಸರಕಾರದ ನಡವಳಿಕೆ, ಕಾರ್ಯವೈಖರಿ ಮೆಚ್ಚಿ ಜನರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ನಿರೀಕ್ಷೆಯಿದೆ. ಹಿಂದುತ್ವ ಮೊದಲಾದ ಭಾವನಾತ್ಮಕ ವಿಚಾರ ಮೀರಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಹುಮತ ಸಿಕ್ಕಿ 8 ಮತದಾರ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.

ಈಶ್ವರಪ್ಪ ಬಂಡಾಯ ಸ್ಪರ್ಧೆ ಕಾಂಗ್ರೆಸ್ ಅಭ್ಯರ್ಥಿಗೆ ಸಹಕಾರವಾಗುತ್ತಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬೇರೆಯವರ ಮನೆ ಒಡೆಯುವುದು, ಬೇರೆಯವರ ವೀಕ್ನೆಸ್ ಉಪಯೋಗಿಸಿಕೊಂಡು ಮೇಲಕ್ಕೇರುವ ಅವಶ್ಯಕತೆ ಕಾಂಗ್ರೆಸ್ಸಿಗಿಲ್ಲ. ಬಿಜೆಪಿಗರಿಗೆ ಹೊಡೆತ ಬಿದ್ದಿರುವುದು ಎದ್ದು ಕಾಣಿಸುತ್ತಿದೆ. ಆದರೆ ಅದನ್ನು ನಾವು ಹೆಚ್ಚು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಗ್ಯಾರೆಂಟಿ ಯೋಜನೆಯನ್ನು ಮತವಾಗಿ ಪರಿವರ್ತಿಸುವುದು ಕಾಂಗ್ರೆಸ್ ಯೋಚನೆಯಾಗಿದೆ. ಹಾಗೆಯೇ ನಮ್ಮ ಎದುರಿನ ಯಾವ ಅಭ್ಯರ್ಥಿ ಕೂಡ ವಿರೋಧ ಪಕ್ಷದ ಅಭ್ಯರ್ಥಿ ಎಂಬ ಅರಿವಿನೊಂದಿಗೆ ಕೆಲಸ ಮಾಡುತ್ತೇವೆ. ಬಿಜೆಪಿ ಕೂಡ ಗೊಂದಲದ ಗೂಡಾಗಿ, ರಾಡಿಯಾಗಿದೆ. ಜಾತಿ ಧರ್ಮ ಮೀರಿ ಕೆಲಸದ ಮೇಲೆ ಮತ ಕೇಳುವ ಪರಿಸ್ಥಿತಿ ಬರಬೇಕು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಶ್ರೀನಿವಾಸ ಪೂಜಾರಿಯವರಿಗೆ ಟಿಕೆಟ್ ನೀಡಿದ್ದಾರೆಂದರೆ‌ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಎಷ್ಟು ವಿರೋಧವಿದೆ ಎಂದು ತಿಳಿಯುತ್ತದೆ. ಇದೆಲ್ಲಾ ಸಂಗತಿಗಳು ಬಿಜೆಪಿ ವಲಯದಲ್ಲಿ ರಾಡಿಯಾಗುತ್ತಿದ್ದು ಅದನ್ನು ಅವರೆ ನೋಡಿಕೊಳ್ಳಲಿ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ.ಎಂ ಸುಕುಮಾರ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಮುಖಂಡರಾದ ರಾಜು ಪೂಜಾರಿ, ಜಿ.ಎ ಬಾವಾ, ಅಶೋಕ್ ಪೂಜಾರಿ ಬೀಜಾಡಿ, ಡಿ.ಆರ್ ರಾಜು ಮೊದಲಾದವರಿದ್ದರು.

ಮೂರು ಹಂತದಲ್ಲಿ ಪ್ರಚಾರ
ಮಾ.20ರಿಂದ ಶಿವಮೊಗ್ಗದಿಂದ ಆರಂಭಿಸಿ ಚುನಾವಣೆಯವರೆಗೆ ನಿರಂತರವಾಗಿ ಕಾಂಗ್ರೆಸ್ ಪ್ರಚಾರ ಕಾರ್ಯ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿದ್ದು ಮುಖಂಡರು, ಕಾರ್ಯಕರ್ತರ ಭೇಟಿ, ಪ್ರಚಾರ ಕಾರ್ಯ ನಡೆಯಲಿದೆ. ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಗ್ರಾಮಪಂಚಾಯತ್ ಮಟ್ಟದಲ್ಲಿಯೂ ಆಗಮಿಸಿ ಮತಯಾಚನೆ ನಡೆಸಲಿದ್ದಾರೆ. ಜಿ.ಪಂ ಹಾಗೂ ಹೋಬಳಿ ಮಟ್ಟದಲ್ಲಿ ಶಿವರಾಜಕುಮಾರ್ ಮತಪ್ರಚಾರ ನಡೆಸಲಿದ್ದು, ರಾಜ್ಯ ನಾಯಕರು ಬ್ಲಾಕ್, ತಾಲೂಕು ಮಟ್ಟದಲ್ಲಿ ಪ್ರಚಾರ ಕೆಲಸ ಮಾಡಲಿದ್ದಾರೆ. ಬೈಂದೂರು-ಶಿವಮೊಗ್ಗ ಕ್ಷೇತ್ರದ ಧ್ವನಿಯಾಗಿ ಗೀತಾ ಶಿವರಾಜಕುಮಾರ್ ಕೆಲಸ ಮಾಡಲಿದ್ದಾರೆ. ಇಲ್ಲಿ ಯಾರು ಮಧ್ಯವರ್ತಿಗಳಿಲ್ಲ, ನೇರ ಗೀತಾ ಅವರೆ ಸ್ಪಂದನೆ ನೀಡಲಿದ್ದು ಶಿವಣ್ಣ ಕೂಡ ಇದನ್ನು ಮೊದಲೆ ತಿಳಿಸಿದ್ದಾರೆಂದರು.

Comments are closed.