ಕರ್ನಾಟಕ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ: ಸಿಎಂ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಸ್ಪೋಟದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ ತನಿಖೆಯಲ್ಲಿ ಸಣ್ಣ ಪ್ರಮಾಣದ ಸುಧಾರಿತ ಸ್ಪೋಟಕವಾಗಿದೆ ಎಂದು ತಿಳಿದುಬಂದಿದೆ, ಪೂರ್ಣ ವರದಿ ಬಂದ ನಂತರ ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕ್ಯಾಶಿಯರ್ ಬಳಿ ಟೋಕನ್ ಪಡೆದು ಅಲ್ಲಿ ತಿಂಡಿ ತಿಂದಿರುವ ವ್ಯಕ್ತಿ, ಬ್ಯಾಗ್ ಇಟ್ಟು ಬಂದಿದ್ದಾನೆ ಎಂಬ ಮಾಹಿತಿ ದೊರೆತಿದೆ. ಘಟನೆಯಲ್ಲಿ ಸುಮಾರು ಎಂಟು ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿ ಟಿವಿ ಕ್ಯಾಮರಾ ಪರೀಕ್ಷಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಗೃಹ ಸಚಿವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಲಾಗಿದೆ. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸ್ಪಷ್ಟ ಮಾಹಿತಿ ದೊರೆಯಲಿದೆ.

ರಾಜ್ಯದಲ್ಲಿ ಇಂಥ ಘಟನೆ ನಡೆಯಬಾರದಿತ್ತು. ಮಂಗಳೂರಿನಲ್ಲಿ ಆಗಿದ್ದು ಬಿಟ್ಟರೆ ಪುನ: ಅಂತಹ ಘಟನೆ ಸಂಭವಿಸಿದೆ. ಯಾರು ಇದನ್ನು ಮಾಡಿದ್ದಾರೆ ಎಂದು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

ವಿರೋಧ ಪಕ್ಷಗಳು ಇಂತಹ ವಿಷಯದಲ್ಲಿ ರಾಜಕಾರಣ ಮಾಡಬಾರದು. ಎಲ್ಲರೂ ಈಗ ಸರ್ಕಾರದ ಜೊತೆ ಸಹಕರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Comments are closed.