ಕರಾವಳಿ

ವಾರಾಹಿ ಪವರ್ ಹೌಸ್‌ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಭೇಟಿ, ಅಧಿಕಾರಿಗಳ ಜೊತೆ ಸಭೆ

Pinterest LinkedIn Tumblr

ಕುಂದಾಪುರ: ಕರ್ನಾಟಕ ಸರ್ಕಾರದ ಇಂಧನ ಸಚಿವ ಕೆ.ಜೆ. ಜಾರ್ಜ್ ರವಿವಾರ ಹೊಸಂಗಡಿ ಗ್ರಾಮದ ವಾರಾಹಿ ಪವರ್ ಹೌಸ್‌ಗೆ ಭೇಟಿ ನೀಡಿ, ವಾರಾಹಿ ಪ್ರಾಜೆಕ್ಟ್ ವೀಕ್ಷಣೆ ನಡೆಸಿದ ಬಳಿಕ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭ ನೀರಿನ ಮರುಬಳಕೆಯಿಂದ ವಿದ್ಯುತ್ ಉತ್ಪಾದಿಸುವ ಪಂಪ್ಡ್ ಸ್ಟೋರೇಜ್ ಪ್ಲಾಂಟ್ ಸ್ಥಳ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಮಾಣಿ ಡ್ಯಾಂನಲ್ಲಿರುವ ನೀರಿನ ಶೇಖರಣೆ, ಕೆಪಿಸಿಯಲ್ಲಿ ವಿದ್ಯುತ್ ಉತ್ಪಾದನೆ, ವಿದ್ಯುತ್ ಉತ್ಪಾದನೆಯ ಅನಂತರ ಹೊರಗೆ ಹರಿಯುವ ನೀರಿನ ಪ್ರಮಾಣ, ಹೊಸಂದಾಗಿ ನಿರ್ಮಿಸಲಿರುವ ವಾರಾಹಿ ಪಂಪ್ಡ್ ಸ್ಟೋರೇಜ್ ಪ್ಲಾಂಟ್ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದರು.

ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಕರ್ನಾಟಕ ಇಂಧನ ಸಚಿವಾಲಯವು ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೋರೇಶನ್ ನೊಂದಿಗೆ ವಿವಿಧ ವಿದ್ಯುತ್ ಯೋಜನೆಗಳ ಒಪ್ಪಂದ ನಡೆದಿದೆ. ಈ ಒಪ್ಪಂದದಲ್ಲಿ ವಾರಾಹಿ ಪಂಪ್ಡ್ ಸ್ಟೋರೇಜ್ ಪ್ಲಾಂಟ್ ಕೂಡ ಒಂದಾಗಿದೆ. ಈ ಯೋಜನೆಯು ವಾರಾಹಿ ನದಿಯಲ್ಲಿ ಹೊಸದಾಗಿ ಡ್ಯಾಂ ನಿರ್ಮಾಣ ಮಾಡಿ, ನೀರನ್ನು ಲಿಫ್ಟ್ ಮಾಡಿ, ಪುನಃ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುವ ಯೋಜನೆಯಾಗಿದೆ. ಈ ಯೋಜನೆಯಿಂದ ವಾರಾಹಿ ಮೂಲ ಯೋಜನೆಗೆ ಮತ್ತು ನದಿಯಲ್ಲಿ ನೀರು ಹರಿಯಲು ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.

ವಾರಾಹಿ ಕೆಪಿಸಿ ಮುಖ್ಯ ಅಭಿಯಂತರ(ವಿದ್ಯುತ್) ಉದಯ ನಾಯಕ್, ಮುಖ್ಯ ಅಭಿಯಂತರ(ಕಾಮಗಾರಿ) ಮೋಹನ್, ಅಧೀಕ್ಷಕ ಅಭಿಯಂತರ(ವಿದ್ಯುತ್) ಮಹೇಶ್ ಬಿ.ಸಿ., ಅಧೀಕ್ಷಕ ಅಭಿಯಂತರ (ಕಾಮಗಾರಿ) ಪ್ರಕಾಶ್, ಕಾರ್ಯನಿರ್ವಾಹಕ ಅಭಿಯಂತರರಾದ ಹರೀಶ್ ಕೆ., ರವಿಪ್ರಕಾಶ್. ಕೆಪಿಟಿಸಿಎಲ್ ಎಂಡಿ ಪಂಕಜ್ ಪಾಂಡೆ, ಎಸ್ಇಇ ರವಿಕಾಂತ್ ಕಾಮತ್, ಎಇಇ ಪ್ರಶಾಂತ್, ಮೆಸ್ಕಾಂ ಕುಂದಾಪುರ ಇಇ ಗುರುಪ್ರಸಾದ್ ಭಟ್, ಶಂಕರನಾರಾಯಣ ಎಇಇ ಪ್ರವೀಣ್ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಪ್ರದೀಪಕುಮಾರ ಶೆಟ್ಟಿ ಗುಡಿಬೆಟ್ಟು, ಮೆಸ್ಕಾಂ ಮಾಜಿ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮಹಮ್ಮದ್ ಹನೀಫ್, ಜಿ.ಪಿ. ಮಹಮ್ಮದ್, ಸ್ಥಳೀಯ ಮುಖಂಡರಾದ ತೊಂಬಟ್ಟು ಶ್ರೀನಿವಾಸ ಪೂಜಾರಿ, ಹರ್ಷ ಶೆಟ್ಟಿ ತೊಂಬಟ್ಟು, ಸಂತೋಷ್ ಶೆಟ್ಟಿ ಹೊಸಂಗಡಿ, ಮಂಜುನಾಥ ಕುಲಾಲ ಜನ್ಸಾಲೆ, ಸತೀಶಕುಮಾರ ಶೆಟ್ಟಿ ಕಡ್ರಿ ಮೊದಲಾದವರು ಉಪಸ್ಥಿತರಿದ್ದರು.

Comments are closed.