ಕುಂದಾಪುರ: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಬಿ. ಕಿಶೋರ್ ಕುಮಾರ್ ಅವರಿಗೆ ಬಿಜೆಪಿ ಕುಂದಾಪುರ ಮಂಡಲದ ವತಿಯಿಂದ ಶನಿವಾರ ಅಭಿನಂದನಾ ಸಮಾರಂಭ ಬಿಜೆಪಿ ಕಚೇರಿಯಲ್ಲಿ ನಡೆಯಿತು.


ಈ ಸಂದರ್ಭ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಜೆಪಿ ಪಕ್ಷವನ್ನು ಇನ್ನಷ್ಟು ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ಪಕ್ಷದ ಕಾರ್ಯಚಟುವಟಿಕೆಗಳು ಸಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದ ಗೆಲುವು ಸಾಧಿಸುವಲ್ಲಿ ಹಿನ್ನಡೆಯಾದರೂ ಕೂಡ ಉಡುಪಿಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು ಇದು ಕಾರ್ಯಕರ್ತರ ಗೆಲುವಾಗಿದೆ. ರಾಜಕಾರಣ ಎನ್ನುವುದು ಸನ್ಯಾಸಿಗಳ ಸಂಘವಲ್ಲ. ಬದಲಾಗಿ ಸದಾ ಕ್ರಿಯಾಶೀಲ ಚಟುವಟಿಕೆಯಿಂದಿರುವ ವ್ಯವಸ್ಥೆ. ಚರ್ಚೆ, ಅಡ್ಡಿ-ಆತಂಕಗಳನ್ನು ಬದಿಗೊತ್ತಿ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಬೇಕು. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಾಣುವ ಪಕ್ಷವಾಗಬೇಕೆಂದು ಕರೆಕೊಟ್ಟರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಿ. ಕಿಶೋರ್ ಕುಮಾರ್, ರಾಜಕೀಯಕ್ಕೆ ಪಾದಾರ್ಪಣೆ ಮಾಡುವಾಗ ಯಾವುದೇ ಕನಸು ಕಟ್ಟಿಕೊಂಡಿರಲಿಲ್ಲ. ಎ.ಜಿ. ಕೊಡ್ಗಿಯವರಂತಹ ನಾಯಕತ್ವದ ಗುಣವುಳ್ಳವರ ಜೊತೆ ಬೆಳೆದು ಸದಾ ಕಾರ್ಯಕರ್ತರ ನೋವು-ನಲಿವಿನ ಜೊತೆಗಿದ್ದೆ. ಇತ್ತೀಚೆಗೆ ರಾಜಕೀಯದಿಂದ ಸ್ವಲ್ಪ ದೂರವಿದ್ದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡು ತೃಪ್ತಿಪಟ್ಟಿದ್ದು ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದು ಬಯಸದೆ ಬಂದ ಭಾಗ್ಯವಾಗಿದೆ. ಕಾರಗಯಕರ್ತರೊಂದಿಗೆ ಬೆಳೆದ ನಾನು ಮುಂದೆಯೂ ಕಾರ್ಯಕರ್ತರ ಜೊತೆಗಿರುವೆ. ಇದು ಚುನಾವಣೆ ಚಟುವಟಿಕೆಯ ಪರ್ವಕಾಲವಾಗಿದ್ದು ವ್ಯವಸ್ಥಿತವಾಗಿ ಪಕ್ಷದ ಜವಬ್ದಾರಿ ನಿರ್ವಹಿಸುವೆ ಎಂದರು.
ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು.
ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ದ.ಕ ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಐರೋಡಿ ವಿಠಲ ಪೂಜಾರಿ, ಎಸ್ಸಿ ಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ಗೋಪಾಲ ಕಳಿಂಜೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ಶ್ರೀಧರ್ ಇದ್ದರು.
ಬಿಜೆಪಿ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ ನಿರೂಪಿಸಿ, ಸುರೇಶ್ ಶೆಟ್ಟಿ ಗೋಪಾಡಿ ಸ್ವಾಗತಿಸಿ, ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿ ಸದಾನಂದ ಬಳ್ಕೂರು ವಂದಿಸಿದರು.
Comments are closed.