ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವದ ಮೆರವಣಿಗೆ ವಿಶೇಷ ಆಕರ್ಷಕವಾಗಿತ್ತು.

ಮೆರವಣಿಗೆಯಲ್ಲಿ ಸ್ಥಳೀಯ ಕಲಾತಂಡಗಳು ಸಹಿತ ನಾಸಿಕ್ ಡೋಲು, ತಾಸೆ, ಕೃಷ್ಣನ ಅವತಾರಕ್ಕೆ ಸಂಬಂಧಿಸಿದ 8 ಸ್ತಬ್ಧಚಿತ್ರಗಳು, ಗೀತೆಯ ನಾಣ್ಣುಡಿ ಇರುವ 4 ಟ್ಯಾಬ್ಲೋಗಳು ಸಹಿತ ಸರಕಾರಿ ಇಲಾಖೆಯ ಟ್ಯಾಬ್ಲೋಗಳು, ಕೇರಳ-ಭಾರತೀಯ ಶೈಲಿಯ ವಿವಿಧ ಮಾದರಿಯ ಚೆಂಡೆಗಳು, ಕುಣಿತ ಭಜನೆ, ಜನಪದ ಕಲೆ, ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಮಕ್ಕಳಿಂದ ಪಾರಾಯಣ, ವೈವಿಧ್ಯಮಯ ಕೋಲಾಟ, ಕುಣಿತ ಭಜನೆ, ಬಳ್ಳಾರಿಯ ಕೋಲಾಟ, ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು, ಪರಶುರಾಮನ ಬೃಹತ್ ವಿಗ್ರಹ, ಹುಲಿಯ ಸ್ತಬ್ಧಚಿತ್ರ, ಚಿಲಿಪಿಲಿ ಗೊಂಬೆಗಳು, ಚೆಂಡೆ, ವಯೋಲಿನ್, ಜನಪದ ಕಲೆಗಳು, ಮಧ್ವಗಾನ ಯಾನ, ಕುಣಿತ ಭಜನೆ, ವಿಷ್ಣು ಸಹಸ್ರನಾಮ ಶ್ಲೋಕಗಳು, ಪೌರಾಣಿಕ ಸನ್ನಿವೇಶದ ಸ್ತಬ್ಧಚಿತ್ರಗಳು ಗಮನಸೆಳೆಯಿತು.
ಉಡುಪಿ ನಗರದಾದ್ಯಂತ ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸಿ ಪರ್ಯಾಯ ಮಹೋತ್ಸವದ ಮೆರುಗನ್ನು ಹೆಚ್ಚಿಸಿತು. ರಥಬೀದಿ ಹಾಗೂ ನಗರದ ಸುತ್ತ ವೈವಿಧ್ಯಮಯ ದೀಪಾಲಂಕಾರಗಳಿಂದ ಜನಮನಸೂರೆಗೊಂಡಿತು. ಕೃಷ್ಣಮಠ ರಥಬೀದಿ, ತೆಂಕಪೇಟೆ, ಬಡಗುಪೇಟೆ ರಸ್ತೆ ಸಹಿತ ಕೃಷ್ಣ ಮಠ ಸಂಪರ್ಕಿಸುವ ರಸ್ತೆಗಳಲ್ಲಿ ಭಕ್ತರು ಸಾಗರೋಪದಿಯಲ್ಲಿ ಹರಿದು ಬಂದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
ರಥಬೀದಿ, ಹೊರೆಕಾಣಿಕೆ ಸ್ಥಳದ ಗದ್ದೆ, ಪೇಜಾವರ ಮಠದ ಮುಂಭಾಗ, ಶ್ರೀಕೃಷ್ಣ ಮಠದ ಎದುರು, ಕಿನ್ನಿಮೂಲ್ಕಿ, ಸರ್ವಿಸ್ ಬಸ್ ತಂಗುದಾಣ, ಹಳೆ ಕೆಎಸ್ಸಾರ್ಟಿಸಿ ಬಸ್ ತಂಗುದಾಣ, ತ್ರಿವೇಣಿ ಸರ್ಕಲ್, ತ್ರಿಶಾ ಸರ್ಜಿಕಲ್ ಬಳಿ, ಗಿರಿಜಾ ಸರ್ಜಿಕಲ್ ಬಳಿ, ಪುರಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಲಾಚಟುವಟಿಕೆಯನ್ನು ಸಹಸ್ರಾರು ಸಂಖ್ಯೆಯಲ್ಲಿ ಜನರು ವೀಕ್ಷಿಸಿದರು.
ಸಚಿವೆ, ಸಂಸದೆ, ಶಾಸಕರ ಉಪಸ್ಥಿತಿ:
ಉಡುಪಿಯಲ್ಲಿ ನಡೆಯುತ್ತಿರುವ ಪರ್ಯಾಯ ಮಹೋತ್ಸವದ ಅಂಗವಾಗಿ ಗುರುವಾರ ಬೆಳಗಿನ ಜಾವ 2.30ರಿಂದ ನಡೆದ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಪರ್ಯಾಯ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಭಾಗವಹಿಸಿದರು. ಈ ವೇಳೆ ಪರ್ಯಾಯ ಶ್ರೀ ಕೃಷ್ಣ ಪೂಜಾ ಕೈಂಕರ್ಯ ನೇರವೇರಿಸಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಯಶ್ಪಾಲ್ ಸುವರ್ಣ, ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಶ್ರೀ ಕೃಷ್ಣನ ಭಕ್ತರು ಉಪಸ್ಥಿತರಿದ್ದರು.
Comments are closed.