ಕರ್ನಾಟಕ

ಜನುಮ‌ ದಿನದಂದು ಕಟೌಟ್ ದುರಂತ: ಮೃತ ಮೂವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಯಶ್; ಬರ್ತ್ ಡೇ ಅಂದರೆ, ಭಯ ಅಸಹ್ಯ ಬಂದುಬಿಟ್ಟಿದೆ- ಯಶ್

Pinterest LinkedIn Tumblr

ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಹಿನ್ನೆಲೆ ಭಾನುವಾರ ರಾತ್ರಿ ಕಟೌಟ್ ಕಟ್ಟಲು ಹೋಗಿದ್ದ ವೇಳೆ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದ್ದು ಸೋಮವಾರ ಸಂಜೆ ನಟ ಯಶ್ ಮೃತ ಮೂವರ ನಿವಾಸಕ್ಕೆ ತೆರಳಿ ಕುಟುಂಬಿಕರಿಗೆ ಸಾಂತ್ವನ ಹೇಳಿದರು.

ಕಟೌಟ್ ಹಾಕಲು ಹೋದಾಗ ವಿದ್ಯುತ್ ತಂತಿ ತಗುಲಿ ಹನುಮಂತ, ಮುರಳಿ ನಡವಿನಮನಿ ಮತ್ತು ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಯಶ್ ಮೇಲಿನ ಅಭಿಮಾನದಿಂದ ಮಧ್ಯರಾತ್ರಿ ಹುಟ್ಟುಹಬ್ಬ ಆಚರಿಸಲು ಇವರೆಲ್ಲರೂ ಯೋಜಿಸಿದ್ದರು ಎನ್ನಲಾಗಿದೆ. ಈ ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಡ ರಾತ್ರಿ ಯಶ್ ಫೋಟೋವುಳ್ಳ ಬೃಹತ್ ಬ್ಯಾನರ್ ನಿಲ್ಲಿಸುವಾಗ ವಿದ್ಯುತ್ ತಂತಿಗೆ ತಗುಲಿ ಅವಘಡ ಸಂಭವಿಸಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿಗೆ ವಿಮಾನ ಮೂಲಕ ಆಗಮಿಸಿದ ಯಶ್ ಅಲ್ಲಿಂದ‌ ಘಟನೆ ನಡೆದ ಸೂರಣಗಿ ಎಂಬಲ್ಲಿಗೆ ಕಾರಿನ ಮೂಲಕ ಸಾಗಿ ಮೂರು ಕುಟುಂಬಗಳ ಜೊತೆ ಮಾತನಾಡಿದರು.

ಅಭಿಮಾನ‌ ಅಂದರೆ ಬ್ಯಾನರ್ ಅಲ್ಲ. ಬರ್ತ್ ಡೇ ಅಂದರೆ, ಭಯ ಅಸಹ್ಯ ಬಂದುಬಿಟ್ಟಿದೆ. ನಮ್ಮವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಹುಟ್ಟು ಹಬ್ಬ ಆಚರಣೆ ಮಾಡುವ ಬಗ್ಗೆ ಒಲವು‌ಇಲ್ಲ. ಬ್ಯಾನರ್, ಬೈಕ್ ಚೇಸ್ ಮಾಡುವುದು ಬಿಟ್ಟು ನಿಮ್ಮ ಜೀವನ ಕಂಡುಕೊಂಡರೆ ಅದು ನನಗೆ ಖುಷಿ. ಅಭಿಮಾನಿ ಬೆಳೆದರೆ ಅದು ನಮಗೆ ಖುಷಿ. ಜೀವಕ್ಕೆ ಮಾರಕವಾಗುವ ಅಭಿಮಾನ ಅಗತ್ಯವಿಲ್ಲ.ಯಾರು ಬೇಜಾರಾದರೂ ತೊಂದರೆಯಿಲ್ಲ. ಜವಬ್ದಾರಿಯುತವಾಗಿ ವರ್ತಿಸಿ ಎಂದು ಅಭಿಮಾನಿಗಳಿಗೆ ಕರೆನೀಡಿದರು. ಮೃತರ ಕುಟುಂಬಗಳ ಕಷ್ಟದ ಬಗ್ಗೆ ಅರಿವಿದೆ, ಅಗತ್ಯವಿರುವುದನ್ನು ಮಾಡುತ್ತೇನೆ ಎಂದವರು ತಿಳಿಸಿದರು.

Comments are closed.