ಕರಾವಳಿ

ಪ್ರಧಾನಿ ಮೋದಿ ಉದ್ಯಮಿಗಳ ಸಾಲ ಮನ್ನಾ ಮಾಡಿದ ಬಗ್ಗೆ ಬಿಜೆಪಿ ತುಟಿ ಬಿಚ್ಚುತ್ತಿಲ್ಲ: ಬೀಳಗಿ ಶಾಸಕ ಜೆ.ಟಿ ಪಾಟೀಲ್

Pinterest LinkedIn Tumblr

ಕುಂದಾಪುರ: ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ನಾನು ಬೇಸರವಿಲ್ಲ. ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾದಾಗ ಬೇರೊಬ್ಬರನ್ನು ಸಚಿವರನ್ನಾಗಿ ಮಾಡಲು ಹೇಳಿದ್ದೆ. ಹಣ, ಸೀರೆ, ಇಸ್ತ್ರೀ ಪೆಟ್ಟಿಗೆ, ಸಕ್ಕರೆಗಳನ್ನು ಹಂಚಿ ನನ್ನ ವಿರುದ್ದ ಚುನಾವಣೆ ಎದುರಿಸಿದ ಬಿಜೆಪಿಯ ಪ್ರಬಲ ನಾಯಕನ ವಿರುದ್ದ ಗೆಲುವು ಕಂಡು ನಾಲ್ಕನೆ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಿಗಮ ಮಂಡಳಿ ಸಿಗುವ ಬಗ್ಗೆ ಮಾಹಿತಿ ಇಲ್ಲ ಎಂದು ಬೀಳಗಿ ಶಾಸಕ ಜಗದೀಶ್ ತಿಮ್ಮನಗೌಡ ಪಾಟೀಲ್ ಹೇಳಿದರು.

ಮಂಗಳವಾರ ಖಾಸಗಿ ಕೆಲಸದ ನಿಮಿತ್ತ ಕುಂದಾಪುರಕ್ಕೆ ಆಗಮಿಸಿದ ವೇಳೆ ನಗರದ ಶರೋನ್ ಹೊಟೇಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಲೋಕಸಭಾ ಚುನಾವಣೆಯ ಮೈತ್ರಿಯಿಂದ‌ ಕಾಂಗ್ರೆಸ್ ಗೆ ಯಾವುದೇ ನಷ್ಟವಿಲ್ಲ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಅಸ್ಥಿತ್ವ ಕಳೆದುಕೊಂಡಿದೆ. ಹಿಂದಿನಿಂದಲೂ ದೇವೆಗೌಡರು ಜಾತ್ಯಾತೀತ ಸಿದ್ದಾಂತವನ್ನು ಪ್ರತಿಪಾದಿಸುತ್ತಿದ್ದು ಈ ಬಾರಿ ಜಾತ್ಯಾತೀತ ಸಿದ್ದಾಂತಕ್ಕೆ ಬ್ರೇಕ್ ಹಾಕಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ‌ ಕಡೆಗಳಲ್ಲಿ ಸೋತಿರುವ ಜೆಡಿಎಸ್ ಗೆ ತಮ್ಮ ಪಕ್ಷದ ಅಸ್ತಿತ್ವದ ಬಗ್ಗೆ ಚಿಂತೆಯಾಗಿದೆ. ಅದರಿಂದಲೇ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಜೆ.ಟಿ ಪಾಟೀಲ ಎಂದರು.

ಈ ಸಂದರ್ಭ ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ, ಯುವ ಕಾಂಗ್ರೆಸ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಪೂಜಾರಿ ಹೇರಿಕುದ್ರು, ಕುಂದಾಪುರ ಬ್ಲಾಕ್‌ ಯೂತ್ ಕಾಂಗ್ರೆಸ್ ಪ್ರಧಾನ‌‌ ಕಾರ್ಯದರ್ಶಿ ಸುನಿಲ್‌ ಕುಮಾರ್ ಕೋಡಿ ಇದ್ದರು.

ಕಾಂಗ್ರೆಸ್ ಭಾಗ್ಯಗಳ ಕುರಿತು ಟೀಕೆ ಮಾಡುವ ಬಿಜೆಪಿಗರು ಪ್ರಧಾನಿ ಮೋದಿ ಉದ್ಯಮಿಗಳ ಸಾಲ ಮನ್ನಾ ಮಾಡಿದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಭಾಗ್ಯಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಜೊತೆಗೆ ರಾಜ್ಯವನ್ನು ಅಭಿವೃದ್ದಿಪಥದಲ್ಲಿ ಕೊಂಡೊಯ್ಯುತ್ತದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಜನಸ್ಪಂದನ ಕಾರ್ಯಕ್ರಮ ಚುರುಕು ಪಡೆದುಕೊಳ್ಳುತ್ತಿದೆ‌. ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿಯೂ ಯಶಸ್ವಿಯಾಗುತ್ತಿದೆ. ಈ ಕಾರ್ಯಕ್ರಮದಿಂದ ಬಹುತೇಕ‌ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಸ್ಥಳದಲ್ಲೇ ನ್ಯಾಯ ಸಿಗುತ್ತಿರುವುದು ಸ್ವಾಗತಾರ್ಹ.
-ಜೆ.ಟಿ ಪಾಟೀಲ, ಬೀಳಗಿ ಶಾಸಕ

ಕೆಲ ವರ್ಷಗಳ ಹಿಂದೆ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿಯಾದಾಗ ಈ ಕ್ಷೇತ್ರದಲ್ಲಿ 15 ದಿನ ಇದ್ದು ಅವರ ಪರ ಕೆಲಸ ಮಾಡಿದ್ದೇನೆ. ಅಲ್ಲಿಂದ ಸ್ಥಳೀಯ ಕಾಂಗ್ರೆಸ್ ಮುಖಂಡ, ನನ್ನ ಕಿರಿಯ ಸ್ನೇಹಿತ ಅಶೋಕ್ ಪೂಜಾರಿಯವರ ಪರಿಚಯ. ಖಾಸಗಿ ಕೆಲಸದ ನಿಮಿತ್ತ ಮಂಗಳೂರಿಗೆ ಬಂದಿದ್ದೆ‌. ಈ ವೇಳೆ ಅಶೋಕ ಪೂಜಾರಿಯವರನ್ನು ಭೇಟಿಯಾಗಿದ್ದೇನೆ ಎಂದು ಜೆ.ಟಿ ಪಾಟೀಲ ಹೇಳಿದರು.

Comments are closed.