ಕರಾವಳಿ

ಸೌಜನ್ಯಯುತವಾಗಿ ಜನರೊಂದಿಗೆ ವರ್ತಿಸಿ, ಉತ್ತಮವಾಗಿ ಕರ್ತವ್ಯ ನಿರ್ವಹಿಸಿ: ಪುರಸಭೆ ಅಧಿಕಾರಿ, ಸಿಬ್ಬಂದಿಗಳಿಗೆ ಶಾಸಕ ಕಿರಣ್ ಕೊಡ್ಗಿ ಕಿವಿಮಾತು..!

Pinterest LinkedIn Tumblr

ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕುಡಿಯುವ ನೀರಿನಲ್ಲಿ ಉಪ್ಪಿನಂಶವಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ನಾಲ್ಕು ದಿನದಿಂದ ಉಪ್ಪು ಮಿಶ್ರಿತ ನೀರು ಕುಡಿಯಲು ಅಸಾಧ್ಯ. ಈ ಬಗ್ಗೆ ಸೂಕ್ತ ಕ್ರಮವಹಿಸಿ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿಗಳಿಗೆ ಹಾಗೂ ಜಲಸಿರಿ ಸಂಬಂದಪಟ್ಟವರಿಗೆ ಸೂಚನೆ ನೀಡಿದರು.

ಅವರು ಪುರಸಭೆ ಹಾಗೂ ಶುದ್ಧ ಕುಡಿಯುವ ನೀರಿನ ಸರಬರಾಜು ಯೋಜನೆ ಜಲಸಿರಿಗೆ ಸಂಬಂಧಪಟ್ಟವರ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಪರಿಶೀಲಿಸಿದ ಬಳಿಕ ಜನರಿಗೆ ನೀರು ನೀಡಿ ಎಂದು ತಿಳಿಸಿದ ಶಾಸಕರು ಇನ್ನು‌ ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ತಿಳಿಸಿದರು. ಒಬ್ಬರನ್ನೊಬ್ಬರು ದೂರಿಕೊಳ್ಳದೇ ನಿತ್ಯದ ಜನಪರ ಕೆಲಸಗಳನ್ನು ಸಮನ್ವಯತೆಯಿಂದ ಮಾಡಬೇಕೆಂದರು.

ಪುರಸಭೆಯಿಂದ ಜಲಸಿರಿಗೆ ಹಸ್ತಾಂತರಿಸುವ ಪೂರ್ವದಲ್ಲಿ 3300 ನಳ್ಳಿಗಳ ಸಂಪರ್ಕಗಳಿದ್ದವು. ಅದನ್ನು 6450 ಹೆಚ್ಚಿಸುವ ಬಗ್ಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ 4200 ಆಗಿದ್ದು ನಿಯೋಜಿತ ಗುರಿ ತಲುಪಿಲ್ಲ. ಇದರಿಂದ ಪುರಸಭೆಗೆ ನಷ್ಟವಾಗುತ್ತದೆ. ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ನಿರ್ವಹಣೆಯ ಬಗ್ಗೆಯೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಹೇಳಿದರು. ಜಲಸಿರಿ ಯೋಜನೆ ಹಸ್ತಾಂತರ ಬಳಿಕ ನಿರಿಕ್ಷಿತ ಕೆಲಸವಾಗಿಲ್ಲ. ಯೋಜನೆ ಪೂರ್ವ ಕರಾರಿನಂತೆಯೂ ನಡೆದುಕೊಂಡಿಲ್ಲ. ಜಲಸಿರಿ ಯೋಜನೆ ಗುತ್ತಿಗೆ ಕೆಲಸಕ್ಕೆ ನಿಯೋಜಿಸಿದ ನೌಕರರಿಗೆ ಸಕಾಲಕ್ಕೆ ಸಂಬಳ, ಇಎಸ್ಐ, ಪಿಎಫ್ ಸೌಕರ್ಯ ಒದಗಿಸಲು ಸಂಬಂದಪಟ್ಟವರಿಗೆ ಸೂಚಿಸಿದರು.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಜಲಸಿರಿ ಯೋಜನೆಯವರು, ನಮಗೆ ತಿಳಿಯದಂತೆ ಸಣ್ಣ ನೀರಾವರಿ ಇಲಾಖೆ ಸಂಬಂಧಿತ ಕಾಮಗಾರಿ ಹಿನ್ನೆಲೆ ಅಣೆಕಟ್ಟಿನ ತಡೆಹಲಗೆ ತೆರವು ಮಾಡಿದ್ದರಿಂದ ಕುಡಿಯುವ ನೀರಿನೊಂದಿಗೆ ಉಪ್ಪು ನೀರು ಸೇರಿತ್ತು. ಮಾಹಿತಿ ತಿಳಿಯುತ್ತಲೆ ಅಗತ್ಯ ಕ್ರಮ ಕೈಗೊಂಡು ಜನರಿಗೆ ಸಮಸ್ಯೆಯಾಗದಂತೆ ಮಾಡಿದ್ದೇವೆ ಎಂದರು. ಪುರಸಭೆ ಮುಖ್ಯಾಧಿಕಾರಿ ನಮ್ಮ ಗಮನಕ್ಕೆ ತರಬೇಕಿತ್ತು ಎಂದು ಜಲಸಿರಿಯ ಕೆಲ ಲೋಪ ದೋಷಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪುರಸಭೆ ಆಡಳಿತಾಧಿಕಾರಿ ರಶ್ಮೀ ಎಸ್.ಆರ್ ಅವರು, ಪುರಸಭೆ ಹಾಗೂ ಜಲಸಿರಿ ನಡುವೆ ಸಮನ್ವಯತೆ ಕೊರತೆ ಕಾಣಿಸುತ್ತಿದೆ. ಜಂಟಿ ಸಭೆ ನಡೆಸಿ ಸಮನ್ವಯತೆ ಸಾಧಿಸಿ ಜನರಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸುತ್ತೇವೆ ಎಂದರು.

ಯುಜಿಡಿ ಸಮಸ್ಯೆ ಶೀಘ್ರ ಪರಿಹಾರವಾಗಬೇಕು ಎಂದು ಸೂಚಿಸಿದ ಶಾಸಕರು ಕುಂದಾಪುರ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ, ರಿಕ್ಷಾ ನಿಲ್ದಾಣಗಳ ಬೇಡಿಕೆಯನ್ನು ಆಧ್ಯತೆ ಮೇರೆಗೆ ಗಮನಹರಿಸಿ ಕ್ರಮಕೈಗೊಳ್ಳಲು ತಿಳಿಸಿದರು. ಕುಂದಾಪುರ ಫ್ಲೈಓವರ್ ಕೆಳಭಾಗದಲ್ಲಿ ಖಾಲಿ ಜಾಗವಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಬಳಿ ಮಾತನಾಡಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆಯೇ ಎಂದು ವಿಚಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಿಬ್ಬಂದಿ ಕೊರತೆ: ಕುಂದಾಪುರ ಪುರಸಭೆಯಲ್ಲಿ 23 ವಾರ್ಡ್ ಇದೆ. ಪುರಸಭೆ ಕಚೇರಿಯಲ್ಲಿ ಪೌರಕಾರ್ಮಿಕರ ಸಹಿತ ಒಟ್ಟು 108 ಹುದ್ದೆಗಳಿದೆ. ಆದರೆ ಈಗ 46 ಮಂದಿ ಕಾರ್ಯನಿರ್ವಹಿಸುತ್ತಿದ್ದು 62 ಹುದ್ದೆ ಖಾಲಿ ಇದೆ. 16 ಮಂದಿ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ತಿಂಗಳು ಒಬ್ಬರು ಎಫ್‌ಡಿಎ ದರ್ಜೆಯವರು ನಿವೃತ್ತಿ ಹೊಂದಲಿದ್ದಾರೆ. ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಶಾಸಕರ ಗಮನಕ್ಕೆ ತಂದರು.

ಜನರಿಗೆ ಅಗತ್ಯ ಸೌಕರ್ಯ ಒದಗಿಸಿ
ಪುರಸಭೆಯಲ್ಲಿ ನಿತ್ಯ‌ಬರುವ ಜನರಿಗೆ ಅಗತ್ಯ ಸೌಕರ್ಯ ಸಿಗಬೇಕು. ಕೆಲಸಕ್ಕಾಗಿ ನಿತ್ಯ ಅಲೆಯುವಂತೆ ಮಾಡಬಾರದು. ಸೌಜನ್ಯಯುತವಾಗಿ ನಡೆದುಕೊಂಡು ಜನರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಕರ್ತವ್ಯ ನಿರ್ವಹಿಸಿ. ಸೇವೆ ಎಂದು ಭಾವಿಸದೆ ಕರ್ತವ್ಯ ಎಂಬ ಚಿಂತನೆಯಲ್ಲಿ ಸ್ಪಂದನೆ ನೀಡಿ.
– ಕಿರಣ್ ಕುಮಾರ್ ಕೊಡ್ಗಿ (ಕುಂದಾಪುರ ಶಾಸಕರು)

Comments are closed.