ಕರ್ನಾಟಕ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನಾಳೆ ಪ್ರಮಾಣ ವಚನ: ಅಧಿಕೃತ ಘೋಷಣೆ | ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ

Pinterest LinkedIn Tumblr

ಬೆಂಗಳೂರು: ಕರ್ನಾಟಕ ರಾಜ್ಯದ ಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಜನತೆಗೆ ಉತ್ತರ ಸಿಕ್ಕಿದೆ. ಸಿದ್ದರಾಮಯ್ಯ ಸಿಎಂ ಹಾಗೂ ಡಿ.ಕೆ ಶಿವಕುಮಾರ್ ಡಿಸಿಎಂ ಎಂಬುದು ಖಾತ್ರಿಯಾಗಿದ್ದು ಸಿದ್ದರಾಮಯ್ಯನವರ ಪ್ರಮಾಣ ವಚನ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಸಲು ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿದೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಮಧ್ಯಾಹ್ನ 3.30ಕ್ಕೆ ಸಿದ್ದರಾಮಯ್ಯ ಮತ್ತು ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಈ ಮೂಲಕ ಈ ಎರಡನೇ ಬಾರಿ ಸಿದ್ದರಾಮಯ್ಯ ಕಂಠೀರವ ಸ್ಟೇಡಿಯಂನಲ್ಲೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಿಗದಿಯಾದ ಬೆನ್ನಲ್ಲೇ ಅಧಿಕಾರಿಗಳು ಸಿದ್ಧತೆಗಾಗಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದಾರೆ. ಸುಮಾರು 1 ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳ ಪಾಲ್ಗೊಳ್ಳುವಿಕೆಯಲ್ಲಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲು ತಯಾರಿ ಮಾಡಲಾಗುತ್ತದೆ ಎನ್ನಲಾಗಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ನ ಬೆಂಬಲಿತ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಆಗಮಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ನಾಯಕರು ಬರುವ ಬಗ್ಗೆ ಇನ್ನಷ್ಟೇ ಮಾಹಿತಿಗಳು ಹೊರಬೀಳಬೇಕಾಗಿದೆ.

2013 ರಲ್ಲೂ ಸಿದ್ದರಾಮಯ್ಯ ಕಂಠೀರವ ಸ್ಟೇಡಿಯಂನಲ್ಲೇ ಪ್ರಮಾಣವಚನ ಸ್ವೀಕರಿಸಿ 5 ವರ್ಷ ಅಧಿಕಾರ ನಡೆಸಿದ್ದರು.

Comments are closed.